ಹೊಸದಿಗಂತ ವರದಿ ಬೆಳಗಾವಿ:
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಧಿಡೀರ ಬೆಳಗಾವಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಸ್ವಾಗತಿಸಲು ಬಾರದ ಕಾಂಗ್ರೆಸ್ ಶಾಸಕರ ಪೈಕಿ ಮೂವರು, ಶುಕ್ರವಾರ ನಗರದಲ್ಲಿ ಪ್ರತ್ಯಕ್ಷರಾಗಿದ್ದರು.
ಬುಧವಾರ ಬೆಳಗಾವಿ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಸ್ವಾಗತಿಸಲು ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾರೂ ಇರಲಿಲ್ಲ. ಬುಧವಾರ ನಗರದಲ್ಲಿ ವಾಸ್ತವ್ಯ ಮಾಡಿ ಗುರುವಾರ ಬೆಂಗಳೂರಿಗೆ ತೆರಳಿದರೂ ಕೂಡ ಅವರ ಬಳಿ ಒಬ್ಬರೇ ಒಬ್ಬ ಕೈ ಶಾಸಕರು ಸುಳಿದರಲಿಲ್ಲ.
ಆದರೆ, ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತ್ಯಕ್ಷರಾದ ಬೆಲಗಾವಿ ಉತ್ತರ ಶಾಸಕ ಆಶೀಪ್(ರಾಜು) ಸೇಠ್, ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಚೆನ್ನಮ್ಮನಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಸಾರಿ ಸಾರಿ ಹೇಳಿದರು. ನಮ್ಮಲ್ಲಿ ಯಾವುದೇ ಬಣ ಇಲ್ಲ, ನಮ್ಮದೆಲ್ಲರದ್ದೂ ಒಂದೇ ಬಣ ಎಂದು ಹೇಳುವಾಗ ಅವರ ಮೊಗದಲ್ಲಿ ಕೃತಕ ನಗೆ ಕಂಡು ಬಂತು.