ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಲ್ಲಿ ನೆಲೆಸಿದ್ದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸುಮಾರು ನಾಲ್ಕು ವರ್ಷಗಳ ಬಳಿಕ ತಮ್ಮ ದೇಶ ಪಾಕ್ಗೆ ಮರಳಿದ್ದಾರೆ.
ದೇಶವು ಪ್ರಕ್ಷುಬ್ಧ ರಾಷ್ಟ್ರೀಯ ಚುನಾವಣೆ ನಿರೀಕ್ಷಿಸುತ್ತಿರುವ ಬೆನ್ನಲ್ಲೇ ನವಾಜ್ ಷರೀಫ್ ತಾಯ್ನಾಡಿಗೆ ಮರಳಿದ್ದು, 4ನೇ ಬಾರಿಗೆ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ದಂಗೆಯಲ್ಲಿ ಪದಚ್ಯುತಗೊಂಡಿದ್ದ ಷರೀಫ್ ಶನಿವಾರ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ತನ್ನ ಖಾಸಗಿ ವಿಮಾನದಲ್ಲಿ ಬಂದಿಳಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ.
2017 ರಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಅವರು ಅಧಿಕಾರದಿಂದ ಅನರ್ಹರಾಗಿ ಬಳಿಕ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಈ ಆರೋಪಗಳನ್ನು ಅವರು ನಿರಾಕರಿಸಿದರು. ಆದರೆ ಷರೀಫ್ ಅವರ ಅನಾರೋಗ್ಯದ ಹಿನ್ನೆಲೆ ನೀಡಿದ್ದ ಶಿಕ್ಷೆಯನ್ನು ಅಮಾನತುಗೊಳಿಸಲಾಯಿತು. ನಾಲ್ಕು ವಾರಗಳಲ್ಲಿ ದೇಶಕ್ಕೆ ಹಿಂದಿರುಗುವ ಷರತ್ತಿನ ಮೇಲೆ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು. ಆದರೆ ಈ ನಿಯಮವನ್ನು ಉಲ್ಲಂಘಿಸಿದ ಷರೀಫ್ ದುಬೈನಲ್ಲೇ ಉಳಿದುಬಿಟ್ಟರು.
ಇಸ್ಲಾಮಾಬಾದ್ ನ್ಯಾಯಾಲಯವು ತಮ್ಮ ವಿರುದ್ಧ ಇರುವ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿದ ಕೆಲವೇ ದಿನಗಳಲ್ಲಿ ಅವರು ಪಾಕಿಸ್ತಾನಕ್ಕೆ ಹಿಂತಿರುಗಿದ್ದಾರೆ, ಅಂದರೆ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಅವರನ್ನು ಬಂಧಿಸಲಾಗುವುದಿಲ್ಲ. 2019ರಲ್ಲಿ ಸ್ವಯಂ ಗಡೀಪಾರಿಗೆ ಒಳಗಾಗಿದ್ದ ಷರೀಫ್ ಅವರು ಲಂಡನ್ಗೆ ಹಾರಿದ್ದರು. ಬಳಿಕ ದುಬೈಗೆ ಬಂದಿದ್ದರು.