ಹೊಸದಿಗಂತ ವರದಿ ಹಾವೇರಿ:
ನಗರದ ಶಹರ ಪೊಲೀಸ್ ಠಾಣೆ ಬಳಿ ಕಿತ್ತೂರು ರಾಣಿ ಚೆನ್ನಮ್ಮ ನ ವೃತ್ತ ನಿರ್ಮಾಣಕ್ಕೆ ರೂ.೧ಕೋಟಿ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ವಿಧಾನಸಭೆ ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ಗುರು ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಹಾಗೂ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ತಾವು ಶಾಸಕರಾಗಿದ್ದಾಗ ಈ ವೃತ್ತ ಉದ್ಘಾಟಿಸಿದ್ದು, ನಂತರದ ಐದು ವರ್ಷಗಳಲ್ಲಿ ಅದರ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ವೃತ್ತದ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಸಾನ್ನಿದ್ಯ ವಹಿಸಿದ್ದ ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವುದು ರಾಣಿ ಚನ್ನಮ್ಮ ಜಯಂತಿ ಅಲ್ಲ ವಿಜಯೋತ್ಸವ. ೧೮೨೪ ರಲ್ಲಿ ಥ್ಯಾಕರೆ ವಿರುದ್ದ ರಾಣಿ ಚೆನ್ನಮ್ಮ ಗೆಲುವು ಕಂಡಿದ್ದ ಪ್ರಯುಕ್ತ ನಡೆಯುವ ವಿಜಯೋತ್ಸವ. ಮುಂದಿನ ವರ್ಷ ಆ ವಿಜಯೋತ್ಸವದ ೨೦೦ನೇ ಸ್ಮರಣೋತ್ಸವ ನಡೆಯಲಿದೆ. ಆ ಹೊತ್ತಿಗೆ ನಗರದ ಕಿತ್ತೂರ ರಾಣಿ ಚೆನ್ನಮ್ಮ ನ ಮೂರ್ತಿ ಮತ್ತು ವೃತ್ತದ ಉದ್ಘಾಟನೆ ನಡೆಯುವಂತಾಗಲಿ, ಅದಕ್ಕೆ ಪೂರಕವಾದ ಸಹಕಾರ ನೀಡಲು ಸಮಾಜ ಬದ್ದವಾಗಿದೆ ಎಂದರು.
ಡಾ.ಎಫ್.ಡಿ. ಗಡ್ಡಿಗೌಡರ ಉಪನ್ಯಾಸ ನೀಡಿದರು. ಜಿಲ್ಲಾದ್ಯಕ್ಷ ನಾಗೇಂದ್ರ ಕಡಕೋಳ, ಸಮನ್ವಯ ಸಮಿತಿ ಅಧ್ಯಕ್ಷ ವಿರೇಶ ಮತ್ತಿಹಳ್ಳಿ, ಹರಿಹರ ಪೀಠದ ಧರ್ಮದರ್ಶಿ ಪಿ.ಡಿ. ಶಿರೂರ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಸಾಧಕ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.