ಹೊಸದಿಗಂತ ವರದಿ,ಶಿವಮೊಗ್ಗ:
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ನವೆಂಬರ್ 23ರಿಂದ ಮೊಟ್ಟೆಯ ಜೊತೆಗೆ ವಿಶೇಷ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕಡಿಮೆ ಮಕ್ಕಳಿರುವ ಶಾಲೆಗಳೂ ಇವೆ. ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ಮಾಡಲು ಯೋಜಿಸಲಾಗುತ್ತಿದೆ ಎಂದರು.
ಹಾಲಿ ಇರುವ ಪಠ್ಯಪುಸ್ತಕ ಗಾತ್ರ ತಗ್ಗಿಸಲು ಯೋಜಿಸಲಾಗಿದೆ. ಈ ಸಂಬಂಧ ಮೂರು ನಾಲ್ಕು ಸಭೆ ಗಳೂ ಆಗಿವೆ. ಇನ್ನೊಂದು ವರ್ಷದಲ್ಲಿ ಬದಲಾವಣೆ ತರಲಾಗುವುದು. ಕೆಲ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಹಾಗಿ ಮಾಡಿಸಿದರೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಹಿಂದೆ ಶಾಲೆಗಳ ನಿರ್ವಹಣೆಗೆ 10,000 ರೂ. ನೀಡಲಾಗುತ್ತಿತ್ತು. ಆ ಮೊತ್ತವನ್ನು ಈಗ 20,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಶೌಚಾಲಯ ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸಬಹುದಾಗಿದೆ ಎಂದರು.