ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮಾತನಾಡಲು ಉದ್ಯಮಿ ಹೀರಾನಂದಾನಿಯಿಂದ ಲಂಚ ಪಡೆದು ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ ಆರೋಪ ಹೊತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ತಮ್ಮ ಸಂಸತ್ತಿನ ಲಾಗಿನ್ ಐಡಿ ಹಾಗೂ ಪಾಸ್‌ವರ್ಡನ್ನು ಉದ್ಯಮಿಯ ಸಿಬ್ಬಂದಿ ಜತೆಗೆ ಹಂಚಿಕೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
‘ನನ್ನ ಪ್ರಶ್ನೆಗಳನ್ನು ಟೈಪ್ ಮಾಡಲು ದರ್ಶನ್ ಅವರ ಸಿಬ್ಬಂದಿಗೆ ನನ್ನ ಸಂಸತ್ ಐಡಿಯ ಪಾಸ್‌ವರ್ಡ್ ನೀಡಿದ್ದು ನಿಜ. ಆದರೆ ಒಟಿಪಿ ನನಗೆ ಬರುತ್ತಿತ್ತು. ನನ್ನ ಅನುಮೋದನೆಯ ನಂತರವೇ ಪ್ರಶ್ನೆ ಪೋಸ್ಟ್ ಆಗುತ್ತಿತ್ತು’ ಎಂದಿದ್ದಾರೆ. ಈ ಮೂಲಕ, ನನಗೆ ಗೊತ್ತಾಗದಂತೆ ಹೀರಾನಂದಾನಿ, ನನ್ನ ಪರ ಪ್ರಶ್ನೆ ಕೇಳುತ್ತಿದ್ದರು ಎಂಬ ಆರೋಪ ನಿರಾಕರಿಸಿದ್ದಾರೆ.
ಸಂಸತ್ ಸಮಿತಿ ವಿಚಾರಣೆಗೆ ಅಕ್ಟೋಬರ್ 30ಕ್ಕೆ ಬರಲು ಆಗದು. ನವೆಂಬರ್ 5ರ ನಂತರ ಹೋಗುವೆ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಯು ನವೆಂಬರ್ 2 ರಂದು ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಸಮನ್ಸ್ ನೀಡಿದೆ. ಅಕ್ಟೋಬರ್ 31 ರೊಳಗೆ ಹಾಜರಾಗುವಂತೆ ಈ ಹಿಂದೆ ನೋಟಿಸ್ ನೀಡಲಾಗಿತ್ತಾದ್ರೂ, ಆ ವೇಳೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಟಿಎಂಸಿ ಸಂಸದೆ ಹೇಳಿದ್ದರು.
ಅವರು ಹೊಸ ದಿನಾಂಕವನ್ನು ಕೋರಿದ ನಂತರ ದಿನಾಂಕವನ್ನು ಬದಲಾಯಿಸಲಾಗಿದೆ. ಆದರೆ ಸಂಸತ್ ನೈತಿಕ ಸಮಿತಿಯು ಹೆಚ್ಚಿನ ವಿಸ್ತರಣೆಯನ್ನು ನೀಡಲ್ಲ ಎಂದಿದ್ದು, ನವೆಂಬರ್ 2 ರಂದು ಹಾಜರಾಗುವಂತೆ ಸೂಚಿಸಿದೆ.