ಹೊಸದಿಗಂತ ವರದಿ,ಮಂಗಳೂರು :
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದ್ವೇಷದ ರಾಜಕಾರಣ ನಡೆಸಲಾಗುತ್ತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ವಿನಾಕಾರಣ ಎರಡು ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ರಾಜ್ಯದಲ್ಲಿ ಸರ್ವಾಧಿಕಾರಿ, ಹಿಟ್ಲರ್ ಧೋರಣೆಯ ಸರಕಾರವಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದ ಬಳಿಕ ರಾಜಕೀಯ ಮುಖಂಡರು, ರಾಷ್ಟ್ರೀಯತೆ ಪರ ಚಿಂತಕರು, ಹಿಂದುತ್ವದ ಪರ ಇರುವವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದೀಗ ಕ್ರಿಯಾಶೀಲರಾಗಿರುವ ಜನಪ್ರತಿನಿಗಳ ವಿರುದ್ಧವೂ ಎಫ್‌ಐಆರ್ ಮಾಡಲಾಗುತ್ತಿದೆ. ಕೇಸ್ ದಾಖಲಿಸಿ ಜನಪ್ರತಿನಿಗಳ ಹಕ್ಕುಗಳಿಗೆ ದಿಗ್ಭಂಧನ ವಿಸಲಾಗುತ್ತಿದೆ. ಕೋಲಾರದ ಸಂಸದರನ್ನು ಅಲ್ಲಿನ ಎಸ್ಪಿ ಇತ್ತೀಚೆಗೆ ದೈಹಿಕವಾಗಿ ಎಳೆದಾಡಿದ್ದಾರೆ. ಬೆಳ್ತಂಗಡಿಯಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆ ವಿರುದ್ಧ ಮಾತನಾಡಿದ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರನ್ನು ಅರಣ್ಯ ಇಲಾಖೆ ಅಕಾರಿಗಳು ದೂಡಿ ಹಾಕಿದ್ದಾರೆ. ಸಿಎಂ ವಿರುದ್ಧದ ಪೋಸ್ಟ್‌ವೊಂದನ್ನು ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೆ ಎಫ್‌ಐಆರ್ ಮಾಡಿರುವುದು ಸರಿಯಲ್ಲ. ಇವೆಲ್ಲದರ ವಿರುದ್ಧ ಬಿಜೆಪಿ ಉಗ್ರ ಸ್ವರೂಪದ ಹೋರಾಟ ನಡೆಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕಾಂಗ್ರೆಸ್ ಸರಕಾರ ರಾಷ್ಟ್ರವಿರೋಧಿಗಳ ಮೇಲೆ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ. ಕೋಲಾರ ಹಾಗೂ ಶಿವಮೊಗ್ಗದಲ್ಲಿ ಖಡ್ಗದ ಪ್ರತಿಕೃತಿ ಪ್ರದರ್ಶನ, ಪಾಕಿಸ್ತಾನ ಪರ ಘೋಷಣೆ ಕೂಗಿದ ರಾಷ್ಟ್ರವಿರೋಗಳ ವಿರುದ್ಧ ಎಫ್‌ಐಆರ್ ಮಾಡಿಲ್ಲ. ಪ್ರಧಾನಿ ಮೋದಿ ಅವರನ್ನು ನರಹಂತಕ ಎಂದು ಕರೆದಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ತನ್ನ ವಿರುದ್ಧದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಿರುವುದು ಶಾಸಕರ ಧ್ವನಿ ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಬೆಳ್ತಂಗಡಿಯ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಬಡ ರೈತನ ಪರವಾಗಿ ಧ್ವನಿ ಎತ್ತಿದ್ದಾರೆ. ಕಳೆಂಜದ ರೈತರೊಬ್ಬರ ಮನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಲು ಮುಂದಾದಾಗ ಶಾಸಕರು ರೈತರ ಪರವಾಗಿ ನಿಂತಿದ್ದಾರೆ. ಯಥಾಸ್ಥಿತಿ ಕಾಪಾಡಿ, ಜಂಟಿ ಸರ್ವೆ ನಡೆಸಿ ಎಂಬ ಅರಣ್ಯ ಸಚಿವರ ಸೂಚನೆ ಹೊರತಾಗಿಯೂ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ. ಬಡ ರೈತನ ಗುಡಿಸಲು ತೆರವಿಗೆ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳೊಂದಿಗೆ ಆಗಮಿಸಿ ದರ್ಪ ಮೆರೆದಿದ್ದಾರೆ. ತಡೆಯಲು ಬಂದ ಶಾಸಕರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ನಳಿನ್‌ಕುಮಾರ್ ಆಪಾದಿಸಿದರು.
ಆಪರೇಶನ್ ಕಮಲದ ಬಗ್ಗೆ ಕಾಂಗ್ರೆಸ್ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್‌ಕುಮಾರ್ ಕಟೀಲು, ಕಾಂಗ್ರೆಸ್‌ನ ಒಳಗೆ ಆಂತರಿಕ ಜಗಳ ಪ್ರಾರಂಭವಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮೂರು ಬಣಗಳ ನಡುವೆ ಜಗಳ ನಡೆಯುತ್ತಿದೆ. ಅದನ್ನು ಮರೆಮಾಚಲು ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಡಿನ್ನರ್ ಮೀಟ್ ಆಗಿದೆ. ಮುಂದಕ್ಕೆ ರೆಸಾರ್ಟ್ ರಾಜಕಾರಣ ನಡೆಯುತ್ತದೆ. ಬಿಜೆಪಿ ಆಪರೇಷನ್ ಮಾಡಬೇಕಿಲ್ಲ. ಕಾಂಗ್ರೆಸ್‌ನ ಆಂತರಿಕ ಜಗಳದಿಂದಲೇ ಸಿದ್ದರಾಮಯ್ಯ ಸರಕಾರ ಬಿದ್ದು ಹೋಗುತ್ತದೆ ಎಂದರು.