Sunday, December 3, 2023

Latest Posts

ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ,ಮಂಗಳೂರು :

ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿಗಮ ಮಂಡಳಿಗಳಿಗೆ ಮೊದಲ ಹಂತದಲ್ಲಿ ಕೆಲವು ಮಂದಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಮನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು ಎಂಬ ಪ್ರಶ್ನೆಗೆ, ಅವರು ಊಟಕ್ಕೆ ಕರೆದಿರುವುದು, ಅದಕ್ಕೆ ಮಸಾಲೆ ಹಾಕುವುದು ಯಾಕೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ನನ್ನನ್ನೂ ಸೇರಿದಂತೆ ಮಹಾದೇವಪ್ಪ, ಸತೀಶ್ ಜಾರಕಿಹೊಳೆ ಅವರನ್ನು ಊಟಕ್ಕೆ ಕರೆದಿದ್ದರು. ಲೋಕಾಭಿರಾಮವಾಗಿ ಮಾತುಕತೆ ನಡೆಸಲಾಗಿದೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದರು.

ರಾಜ್ಯದಲ್ಲಿ ಬರದಿಂದಾಗಿ ೩೩ ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಪರಿಹಾರಕ್ಕಾಗಿ ಕೇಂದ್ರದಿಂದ ೧೭,೯೧೦ ಕೋಟಿ ರೂ.ಪರಿಹಾರ ಕೇಳಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ. ಪರಿಹಾರಕ್ಕಾಗಿ ಎರಡು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಸಿಎಂ ಆರೋಪಿಸಿದರು.

ಕಾರ್ಕಳದ ಪರಶುರಾಮನ ಮೂರ್ತಿ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ ಅವರು, ಸೌಜನ್ಯ ತನಿಖೆಯನ್ನು ಸಿಬಿಐ ಮಾಡಿದ್ದು, ಮರು ತನಿಖೆಯನ್ನು ಕೇಂದ್ರ ಸರಕಾರ ಮಾಡಬೇಕು. ನಾವೇನೂ ಮಾಡಲಾಗದು ಎಂದು ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!