ಜೈ ಶ್ರೀ ಹನುಮಾನ್…ಪಾಕ್‌ ವಿರುದ್ಧ ಗೆಲುವನ್ನು ದೇವರಿಗೆ ಅರ್ಪಿಸಿದ ಕೇಶವ್ ಮಹಾರಾಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹಾರಾಜ್ ಪರ ಎಲ್ಲಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಒಂದು ವಿಕೆಟ್ ರೋಚಕ ಜಯ ಸಾಧಿಸಿದೆ .

ಪಾಕಿಸ್ತಾನ ನೀಡಿದ್ದ 271 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಇನ್ನೂ 16 ಎಸೆತ ಬಾಕಿ ಇರುವಂತೆಯೇ ಒಂದು ವಿಕೆಟ್ ವಿರೋಚಿತ ಗೆಲುವು ಸಾಧಿಸಿತು. ಕೊನೆಯ ವಿಕೆಟ್‌ಗೆ ತಬ್ರೀಜ್ ಶಮ್ಸಿ ಜತೆ ಮುರಿಯದ 11 ರನ್ ಜತೆಯಾಟವಾಡಿದ ಕೇಶವ್ ಮಹರಾಜ್, ಭರ್ಜರಿ ಬೌಂಡರಿ ಬಾರಿಸಿ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

ಗೆಲುವಿನ ದಡ ಸೇರಿಸಿದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಲುವಿನ ರನ್ ಬಾರಿಸಿದ ಫೋಟೋ ಜತೆಗೆ “ನಾನು ದೇವರನ್ನು ನಂಬುತ್ತೇನೆ. ನಮ್ಮ ಹುಡುಗರಿಂದ ಎಂತಹ ಒಳ್ಳೆಯ ಫಲಿತಾಂಶವಿದು. ತಬ್ರೀಜ್ ಶಮ್ಸಿ ಹಾಗೂ ಏಯ್ಡನ್ ಮಾರ್ಕ್‌ರಮ್‌ ಅವರ ಪ್ರದರ್ಶನ ಅದ್ಭುತವಾಗಿತ್ತು. ಜೈ ಶ್ರೀ ಹನುಮಾನ್” ಎಂದು ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ.

ಅಪಾರ ದೈವಭಕ್ತರಾಗಿರುವ ಆಫ್ರಿಕಾದ ಸ್ಪಿನ್ ಆಲ್ರೌಂಡರ್ ಕೇಶವ್ ಮಹಾರಾಜ್, ವಿಶ್ವಕಪ್ ಆಡಲು ಭಾರತಕ್ಕೆ ಬಂದ ಆರಂಭದಲ್ಲೇ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ಇನ್ನು ಹಿಂದು ಧರ್ಮದ ಮೇಲೆ ಅಪಾರ ಶ್ರದ್ದೆ ಹೊಂದಿರುವ ಕೇಶವ್ ಮಹಾರಾಜ್ ಅವರ ಬ್ಯಾಟ್‌ನಲ್ಲಿ ‘ಓಂ’ ಎನ್ನುವ ಸಿಂಬಲ್ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here