ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾತಾವರಣದಲ್ಲಿ ಏರು ಪೇರಾಗುತ್ತಿದೆ. ಮಳೆಯ ಛಾಯೆ ಕಡಿಮೆಯಾಗಿ ಕೆಲವು ಭಾಗಗಳಲ್ಲಿ ಮಂಜು ಬೀಳತೊಡಗಿದೆ. ಬೆಳಗಿನ ಜಾವ ಚುಮು ಚುಮು ಚಳಿಯೂ ಆರಂಭವಾಗಿದೆ. ವಾತಾವರಣಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯಲ್ಲೂ ಹೊಂದಾಣಿಕೆ ಮಾಡುವುದು ದೇಹಾರೋಗ್ಯ ಕಾಪಾಡಿಕೊಳ್ಳಲು ಅತೀ ಮುಖ್ಯ.
ಈ ರೀತಿ ಮಾಡಿದ ಸಾರು(ರಸಂ) ದೇಹಾರೋಗ್ಯ ವೃದ್ಧಿಸುವುದಲ್ಲದೆ, ಶೀತ, ಜ್ವರದ ಭಾದೆಯಿಂದ ದೂರವಿರುವಂತೆ ಮಾಡುತ್ತದೆ. ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ.
ಬೇಕಾಗುವ ಸಾಮಾಗ್ರಿ:
ಜೀರಿಗೆ ನಾಲ್ಕು ಟೀ ಸ್ಪೂನ್, ತೊಗರಿ ಬೇಳೆ ಎರಡು ಟೀ ಸ್ಪೂನ್, ಒಗ್ಗರಣೆಗೆ ಕರಿಬೇವು, ಇಂಗು, ಒಣಮೆಣಸಿನ ಕಾಯಿ, ಎಣ್ಣೆ, ಕಾಲು ಟೀ ಸ್ಫೂನ್ ಉದ್ದಿನ ಬೇಳೆ, ಸಾಸಿವೆ ಕಾಳು, ರುಚಿಗೆ ಬೇಕಾದಷ್ಟು ಉಪ್ಪು, ಒಂದು ಲೀಟರ್ ನೀರು, ನಿಂಬೆ ಹಣ್ಣು ಗಾತ್ರದ ಬೆಲ್ಲ, ಕಿವುಚಿದ ಹುಣಸೆ ಹುಳಿ ರಸ ಎರಡು ಟೀ ಸ್ಪೂನ್.
ಮಾಡುವ ವಿಧಾನ:
ದೊಡ್ಡ ಬಾಣಲೆಯಲ್ಲಿ ನೀರು ಹಾಕಿ ಸ್ಟೌಮೇಲೆ ಕಾಯಲು ಇಡಿ. ಸರಿಯಾಗಿ ಹೊಗೆಯಾಡಲು ಆರಂಭವಾಗುತ್ತಿದ್ದಂತೆಯೇ ಜೀರಿಗೆ, ತೊಗರಿಬೇಳೆಯನ್ನು ಚೆನ್ನಾಗಿ ಫ್ರೈಮಾಡಿ ಜಜ್ಜಿ ಬಾಣಲೆಯಲ್ಲಿರುವ ನೀರಿಗೆ ಹಾಕಿ. ಬೆಲ್ಲ, ಹುಣೆಸೆಹಣ್ಣಿನ ರಸ ಸೇರಿಸಿ. ಸರಿಯಾಗಿ ಕುದಿದ ನಂತರ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮತ್ತೊಮ್ಮೆ ಕುದಿಸಿ. ಇಂಗು, ಕರಿಬೇವಿನ ಒಗ್ಗರಣೆ ನೀಡಿ. ಬಿಸಿ ಬಿಸಿ ಸಾರು ಕುಡಿಯಲೂ ರುಚಿ, ಊಟಕ್ಕೂ ಸೈ.