ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿ ಕ್ರಿಶ್ಚಿಯನ್ ಸಮಾವೇಶ ಕೇಂದ್ರದಲ್ಲಿ (ಯಹೋವನ ಸಾಕ್ಷಿಗಳ ಕನ್ವೆನ್ಶನ್ ಸೆಂಟರ್) ಸಂಭವಿಸಿದ ಬಾಂಬ್ ಸ್ಫೋಟ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಜಿಲ್ಲೆಯ ಬಸ್ ನಿಲ್ದಾಣ, ರೈಲು ನಿಲ್ದಾಣ, ಆರಾಧನಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ಎರ್ನಾಕುಳಂ ಘಟನೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಆರಾಧನಾಲಯಗಳಿಗೂ ಅಗತ್ಯದ ರಕ್ಷಣಾ ಕ್ರಮಗಳನ್ನು ಅಳವಡಿಸಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ಪೊಲೀಸ್ ಗಸ್ತು ತಿರುಗುವಿಕೆ ಸಹಿತ ಭದ್ರತಾ ಆಯಾಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯವು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಕೇರಳ – ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ, ವರ್ಕಾಡಿ, ಮುಳಿಗದ್ದೆ, ಸಾರಡ್ಕ, ಸುಳ್ಯಪದವು, ಗಾಳಿಮುಖ ಸೇರಿದಂತೆ ವಿವಿಧ ಗಡಿಗಳಲ್ಲೂ ಕೂಡಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಶಯಾಸ್ಪದ ವಾಹನಗಳ ಮೇಲೆ ತೀವ್ರ ನಿಗಾಯಿರಿಸಲಾಗಿದ್ದು, ಕೆಲವೊಂದು ವಾಹನಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗದ ವರದಿಯನ್ನಾಧರಿಸಿ ಜಿಲ್ಲೆಯಲ್ಲಿ ಅಗತ್ಯದ ಕಟ್ಟುನಿಟ್ಟಿನ ಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.