ಪರಭಾಷೆ ಮಾತನಾಡುವವರಿಗೆ ಕನ್ನಡ ಕಲಿಸಿ: ಪಿ.ಸಿ.ಮೋಹನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊರರಾಜ್ಯ, ಹೊರದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷೆ ಮಾತನಾಡುವವರಿಗೆ ನಾವು ಕನ್ನಡ ಕಲಿಸಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮನವಿ ಮಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ  ʻಕನ್ನಡ ರಾಜ್ಯೋತ್ಸವʼದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದಿನದಿನವೂ ನಾವು ಕನ್ನಡದ ಒಂದಷ್ಟು ಪದಗಳನ್ನು ಕಳಕೊಳ್ಳುವ ಪರಿಸ್ಥಿತಿ ಇದೆ. ಬೆಂಗಳೂರಿನ ಕನ್ನಡಿಗರು ವಿಶಾಲ ಹೃದಯಿಗಳು. ಯಾರಾದರೂ ಕನ್ನಡ ಅಲ್ಪಸ್ವಲ್ಪ ಕಲಿತು ಮಾತನಾಡುತ್ತಿದ್ದರೂ ಅವರು ಕನ್ನಡದಲ್ಲಿ ಮಾತನಾಡಲು ಅವಕಾಶ ಕೊಡದೆ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಅದನ್ನು ನಿಲ್ಲಿಸಿ ಕನ್ನಡದಲ್ಲೇ ಮಾತನಾಡುವಂತೆ ಸಲಹೆ ನೀಡಿದರು.

ಕಳೆದ ವರ್ಷ ಯಥೇಚ್ಛವಾಗಿ ಮಳೆ ಬಂದಿತ್ತು. ಈ ವರ್ಷ ಮಳೆಯ ಕೊರತೆ ಆಗಿದೆ. ಕೊರತೆಯ ಸಂದರ್ಭದಲ್ಲೂ ಕಾವೇರಿ ನದಿಯಲ್ಲಿ ನೀರಿಲ್ಲ. ನೀರಿನ ಪ್ರಮಾಣ ಅರ್ಧಕ್ಕೂ ಕಡಿಮೆಯಾಗಿದೆ. ಈ ನಡುವೆ ಸುಪ್ರೀಂ ಕೋರ್ಟಿನ ಸೂಚನೆಯಂತೆ ಕರ್ನಾಟಕ ಸರಕಾರ 2,600 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವೆಲ್ಲರೂ ಕೂಡ ಹೋಗಿ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಬಿಜೆಪಿ ಸಂಸದರು ಈ ಸಂಬಂಧ ಈಗಾಗಲೇ ಪ್ರಲ್ಹಾದ್ ಜೋಷಿಯವರ ಬಳಿ ಮಾತನಾಡಿದ್ದೇವೆ. ಸೂಕ್ತ ಸಮಯದಲ್ಲಿ ಕೇಂದ್ರ ಸರಕಾರದ ಪ್ರಮುಖರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!