ಹೊಸದಿಗಂತ ವರದಿ ಬಾಗಲಕೋಟೆ :
ನವನಗರ ನಿರ್ವಹಣೆ ಸಂಬಂಧ ವಿವಿಧ ಗುತ್ತಿಗೆದಾರರಿಗೆ ಪಾವತಿಸಬೇಕಾದ ಎಲ್ಲ ಅನುದಾನವನ್ನು ಶೀಘ್ರವೇ ನೀಡಲಾಗುವುದು. ಅಲ್ಲದೇ ಕಾರ್ಪಸ್ ಫಂಡ್ ಕೂಡ ಶೀಘ್ರವೇ ಬರಲಿದೆ. ಗುತ್ತಿಗೆದಾರರು ಯಾವುದೇ ಆತಂಕ ಪಡುವುದು ಬೇಡ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಕುಡಿಯುವ ನೀರು, ಬೀದಿದೀಪ, ಕಸ ವಿಲೇವಾರಿ ಸಹಿತ ವಿವಿಧ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನವನಗರವನ್ನು ಕಾರ್ಪಸ್ ಫಂಡ್ ಬಡ್ಡಿ ಹಣದಲ್ಲಿ ನಿರ್ವಹಣೆ ನಡೆಯುತ್ತಿತ್ತು. ಆದರೆ, ಹಿಂದಿನ ಸರ್ಕಾರದಲ್ಲಿ ಠರಾವು ಪಾಸು ಮಾಡಿ, ಕಾರ್ಪಸ್ ಫಂಡ ಅನ್ನು ಕೆಬಿಜೆಎನ್‌ಎಲ್ ನೀಡಲು ನಿರ್ಣಯ ಕೈಗೊಂಡಿದ್ದರು. ಅಷ್ಟೊತ್ತಿಗೆ ಚುನಾವಣೆ ಬಂದಿದ್ದು, ನಾವು ಆಯ್ಕೆಯಾಗಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ, ಕಾರ್ಪಸ್ ಫಂಡನ್ನು ಕೆಬಿಜೆಎನ್‌ಎಲ್‌ಗೆ ನೀಡಲಾಗಿದೆ. ಅದನ್ನು ಮರಳಿ ತರಲು ಈಗಾಗಲೇ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿದ್ದೇವೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ ಸಹಿತ ನಾವೆಲ್ಲ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕಾರ್ಪಸ್ ಫಂಡ ಜತೆಗೆ ಬಿಟಿಡಿಎಗೆ ವಿಶೇಷ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಗರಿಷ್ಠವೆಂದರೂ ತಿಂಗಳೊಳಗಾಗಿ ಕಾರ್ಪಸ್ ಫಂಡ ಮರಳಿ ಬರಲಿದೆ. ಜತೆಗೆ ಗುತ್ತಿಗೆದಾರರ ಎಲ್ಲ ಬಾಕಿ ಹಣ ನೀಡಲೂ ಕ್ರಮ ಕೈಗೊಳ್ಳಲಾಗುವುದು. ನನ್ನ ಮೇಲೆ ಭರವಸೆ ಇಟ್ಟು, ಎಲ್ಲ ಗುತ್ತಿಗೆದಾರರು ದೈನಂದಿನ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.