Monday, December 4, 2023

Latest Posts

ಹಾಸನಾಂಬ ದೇವಿಯ ಉತ್ಸವ ಆರಂಭ, ಭಕ್ತಾದಿಗಳ ನೂಕು-ನುಗ್ಗಲು

ಹೊಸದಿಗಂತ ವರದಿ ಹಾಸನ :

ಹಾಸನಾಂಬ ದೇವಿಯ ಉತ್ಸವ ಇಂದಿನಿಂದ ಆರಂಭಗೊಂಡಿದ್ದು, ಶಾಸ್ತ್ರೋಪ್ತವಾಗಿ ಪೂಜಾ ವಿಧಿ ವಿಧಾನಗಳನ್ನು ನೇರವೇರಿಸಿದ ಬಳಿಕ ತಳವಾರ ಸಮುದಾಯದವರು ದೇವಿಗೆ ದೃಷ್ಟಿ ತೆಗೆದು ಬನ್ನಿ ಕತ್ತರಿಸಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು.

ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದಂತಿತ್ತು. ಅರಸು ವಂಶಸ್ತ ನಂಜೆರಾಜೇ ಅರಸು ಅವರು ಬನ್ನಿ ಕತ್ತರಿಸಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸ್ವರೂಪ್ ಪ್ರಕಾಶ್ ಇತರರು ದೇವಿಯ ಮೊದಲ ದರ್ಶನ‌ಪಡೆದರು.

ಮೊದಲ ದಿನವೇ ಹಾಸನಾಂಬೆ ದರ್ಶನ ಮಾಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ದೇವಾಲಯದ ಬಳಿ ನೆರೆದಿದ್ದರು. ಪೊಲೀಸರ ಬಿಗಿ ಪಹರೆಯಲ್ಲಿ ಭಕ್ತಾದಿಗಳು ಹಾಸನಾಂಬೆ ದರ್ಶನ ಮಾಡಿದರು. ಹಾಸನಾಂಬೆ ಜಾತ್ರೆಯು ಹಾಸನದ ಪ್ರಮುಖ ಆಚರಣೆಯಾಗಿದ್ದು, ವರ್ಷದಲ್ಲಿ ಕೆಲವು ದಿನಗಳು ಮಾತ್ರವೇ ತೆರೆಯಲಾಗುವ ಹಾಸನಾಂಬ ದೇವಾಲಯದ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ವಿವಿದೆಡೆ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತಾಧಿಗಳು ಆಗಮಿಸುತ್ತಾರೆ.
ಹಾಸನಾಂಬೆ ದರ್ಶನವು ಭಕ್ತಾಧಿಗಳಿಗೆ ದೊರಕಲಿ ಎಂಬ ಕಾರಣಕ್ಕೆ ಜಿಲ್ಲಾಡಳೀತವು ಸಕಲ ವ್ಯವಸ್ಥೆಯನ್ನು ಮಾಡಿದ್ದು, ನಾಳೆಯಿಂದ ಹದಿಮೂರು ದಿನಗಳ ಕಾಲ 24 ಗಂಟೆಯೂ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ ಬಾಗಿಲು ಮುಚ್ಚುವಾಗ ದೇವಿಗೆ ಮುಡಿಸಿದ ಹೂ ಬಾಡಿರುವುದಿಲ್ಲ, ದೀಪಗಳು ಹಾಗೆಯೇ ಪ್ರಜ್ವಲಿಸಿರುತ್ತವೆ. ನೈವೇದ್ಯ ಬಿಸಿಯಾಗೇ ಇರುತ್ತದೆ. ಈ ಪವಾಡಕ್ಕೆ ಹೆಸರಾಗಿರುವ ಹಾಸನಾಂಬ ದೇವಿ ಈಗ ಮತ್ತೆ ಭಕ್ತರಿಗೆ ದರ್ಶನ ನೀಡಿದ್ದು ಹತ್ತು ಲಕ್ಷಕ್ಕೂ ಅಧಿಕ ಮಂದಿ ಈ ಬಾರಿ ಆಗಮಿಸುವ ನಿರೀಕ್ಷೆ ಇದೆ.

ಮೊದಲ ದಿನ ಸಾರ್ವಜನಿಕ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲವೆಂದು ಹೇಳಿದ್ದರೂ ಮೊದಲ ದರ್ಶನ ಪಡೆಯಬೇಕೆಂಬ ಕಾತರದಿಂದ ಸಾವಿರಾರು ಜನ ದೇವಸ್ಥಾನದ ಬಳಿ ಜಮಾಯಿಸಿದ್ದರು. ನ. 15 ರಂದು ಗರ್ಭಗುಡಿ ಬಾಗಿಲು ಮುಚ್ಚಿದರೆ ಮತ್ತೆ ದೇವಿಯನ್ನು ಕಾಣಲು ಮತ್ತೊಂದು ವರ್ಷ ಕಾಯಲೆಬೇಕು.

ಆಡಳಿತ ಪಕ್ಷದ ಕಾರ್ಯಕರ್ತರ ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ: ಹಾಸನಾಂಬ ದೇವಾಲಯದಲ್ಲಿ ಇಂದು ಮತ್ತು ನ.15 ಸಾರ್ಜಜನಿಕರಿಗೆ ದರ್ಶನ ಅವಕಾಶವಿಲ್ಲ ಎಂದು ಜಿಲ್ಲಾಡಲಿತ ಮೊದಲಿನಿಂದ ಹೇಳುತ್ತ ಬಂದಿದೆ. ಆದರೂ ಸಹ ನೂರಾರು ಸಂಖ್ಯೆ ಭಕ್ತರ ಹರಿದುಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ದೇವಾಲಯದ ಆವರಣೆಕ್ಕೆ ಬಂದಂತ ವೇಳೆ ಪೋಲಿಸರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ತಡೆಯಲು ಮುಂದಾದರು. ಈ ವೇಳೆ ಪೋಲಿಸರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ‌ ನಡೆಯಿತು. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಆಗಮಿಸಿ ತಿಳಿಗೊಳಿಸಿದರು. ಆಡಳಿತ ಪಕ್ಷದವರೇ ಅಚ್ಚುಕಟ್ಟಾಗಿ ನಡೆಸಿಕೊಡಬೇಕಾದ ಉತ್ಸವದಲ್ಲಿ ಮಾತಿನಚಕಮಕಿ ನಡೆಸಿದ್ದು ಸಾರ್ವಜನಿಕವಲಯದಲ್ಲಿ‌ ನಗೆಪಾಟಲಿಗೆ ಕಾರಣವಾಯ್ತು.

ಏಕಾಂಗಿ ಧರಣಿ ಕುಳಿತ ಮಾಜಿ ನಗರ ಸಭೆ ಅಧ್ಯಕ್ಷ ಆರ್. ಮೋಹನ್:  ಸಮಯ ಸುಮಾರು 2 ಗಂಟೆಯಲ್ಲಿ ತಾಯಿಯ ದರ್ಶನ ಪಡೆಯಲು ನಗರ ಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್ ಮತ್ತು ನಗರ ಸಭೆ ಸದಸ್ಯರು ಆಗಮಿಸಿದ್ದರು. ದೇವಾಲಯದಲ್ಲಿ ದರ್ಶನಕ್ಕೆ ಅಷ್ಟೊತ್ತಿಗಾಗಲೇ ನಿರ್ಭಂದ ಏರಿದ್ದರಿಂದ ಅಧ್ಯಕ್ಷರನ್ನು ಹಾಗೂ ಇತರರನ್ನು ದೇವಾಲಯದ ಒಳಗೆ ಬಿಡಲು ನಿರಾಕರಿಸಿದರು. ಇಡೀ ನಗರದ ಸ್ವಚ್ಚತೆ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಣೆ ಮಾಡಲು ನಗರ ಸಭೆ ಬೇಕು, ಆದರೆ ನಗರ ಸಭೆ ಸದಸ್ಯರಿಗೆ, ಮತ್ತು ನಮಗೆ ದರ್ಶನವಿಲ್ಲವೇ.. ಎಂದು ಆಕ್ರೋಶವ್ಯಕ್ತಪಡಿಸಿ ನಗರ ಸಭೆ ಮಾಜಿ ಅಧ್ಯಕ್ಷ ಬ್ಯಾರಿಕೇಡ್ ಪ್ರವೇಶದ್ವಾರಲ್ಲಿಯೇ ಏಕಾಂಗಿ ಧರಣಿ ನಡೆಸಿದ ಪ್ರಸಂಗ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!