ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆ ರಾಜ್ಯದ 119 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ಇದೇ ತಿಂಗಳ 10ರವರೆಗೆ ಬಿ ಫಾರಂ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ.
ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸ್ವೀಕರಿಸಲಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಲು ಬರುವವರು ಅವಸರ ಮಾಡದೆ ಕೆಲವೇ ಮಂದಿಯೊಂದಿಗೆ ಕಚೇರಿಗೆ ಬಂದು ನಾಮಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.
ಭಾನುವಾರ ನಾಮಪತ್ರಗಳನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ನಾಮಪತ್ರ ಸಲ್ಲಿಕೆಗೆ ಇನ್ನು 7 ದಿನ ಮಾತ್ರ ಬಾಕಿ ಇದೆ. ಕೊನೆ ಗಳಿಗೆಯಲ್ಲಿ ದುಡುಕುವ ಬದಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುವುದು ಉತ್ತಮ. ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಇಚ್ಛಿಸುವವರು ನವೆಂಬರ್ 15ರೊಳಗೆ ಹಿಂಪಡೆಯಬಹುದು. ನವೆಂಬರ್ 30 ರಂದು ಚುನಾವಣೆ ಮತದಾನ, ಡಿಸೆಂಬರ್ 3 ರಂದು ಸಾರ್ವಜನಿಕ ತೀರ್ಪು ಪ್ರಕಟವಾಗಲಿದೆ.