ಚರಿತ್ರೆಗೆ ಎಷ್ಟೇ ಬಣ್ಣ ಹಚ್ಚಿದರೂ ಸತ್ಯಾಂಶ ಹೊರಬರದೇ ಇರಲ್ಲ: ಅಡ್ಡಂಡ ಕಾರ್ಯಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಪೋಲಕಲ್ಪಿತ ಸುಳ್ಳು ಇತಿಹಾಸ ಸೃಷ್ಟಿಸಿ, ವಿಕೃತಗೊಳಿಸಲ್ಪಟ್ಟ ಚರಿತ್ರೆಗೆ ದೀರ್ಘಕಾಲ ಬಾಳಿಕೆ ಇರುವುದಿಲ್ಲ. ನಿಜ ಚರಿತ್ರೆ ಎಂದೂ ಭೂಗರ್ಭದಲ್ಲಿ ಅವಿತಿರಲಾರದು. ಅದು ಹೊರಬರಲೇಬೇಕು ಎಂದು ಖ್ಯಾತ ರಂಗತಜ್ಞ, ನಿರ್ದೇಶಕ, ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೋತ್ಥಾನ ಪರಿಷತ್‌ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಇಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಭಾರತದಲ್ಲಿ ಕಮ್ಯುನಿಸ್ಟ್ ಪ್ರೇರಿತ ಸಮಾಜವಾದ ಬೌದ್ದಿಕ ಹಿನ್ನಡೆಗೆ ಕಾರಣವಾಯಿತು. ವಿದೇಶಿ ರಂಗಭೂಮಿಯನ್ನೇ ಭಾರತೀಯ ಪರಿಕಲ್ಪನೆಗೆ ತಳುಕುಹಾಕಿ, ಇಲ್ಲಿಯ ಮೂಲ ರಂಗಭೂಮಿಯನ್ನು ಹೊಸಕಿ ಹಾಕಿದ್ದು ನಮ್ಮ ದೌರ್ಬಲ್ಯದ ಸೂಚಕವಾಗಿದೆ. ನಮ್ಮ ಪುರಾಣ ಪಾತ್ರಗಳನ್ನು ಇತಿಹಾಸವಾಗಿ ತಿರುಚಿ, ಪಾತ್ರಗಳನ್ನು ಅಪಸವ್ಯವಾಗಿ ತೋರ್ಪಡಿಸಿ ಭಿನ್ನತೆಗೆ ಕಾರಣರಾದ ಕುತ್ಸಿತ ಮನಸ್ಥಿತಿಯನ್ನು ಇನ್ನಾದರೂ ಅರ್ಥೈಸಬೇಕು ಎಂದು ಈ ವೇಳೆ ಕರೆ ಕೊಟ್ಟರು.

ಗುಬ್ಬಿ ವೀರಣ್ಣ, ಮೈಸೂರು ವರದಾಚಾರ್, ನಾಗರತ್ನಮ್ಮ ಮೊದಲಾದವರಿಂದ ಬೆಳೆದುಬಂದ ಟೆಂಟ್ ನಾಟಕ ಕಂಪೆನಿಗಳ ನಾಟಕಗಳಿಂದ ರಾಷ್ಟ್ರೀಯತೆಗೆ ಕುತ್ತು ಬಂದಿರಲಿಲ್ಲ. ಟಿ. ಪಿ. ಕೈಲಾಸಂ, ಬಿ. ವಿ. ಕಾರಂತ ಮೊದಲಾದವರು ಭಾರತೀಯ ರಾಷ್ಟ್ರೀಯತೆಗೆ ಬೆಂಬಲವಾಗಿ ರಂಗಭೂಮಿಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಎಡ ಹಿತಾಸಕ್ತಿಯ ಕಾಕದೃಷ್ಟಿಯ ಕಾರಣ ತಿರುಚಲ್ಪಟ್ಟ ಮನೋಭೂಮಿಕೆ ವಿಜೃಂಭಿಸಿತು. ಇನ್ನಾದರೂ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಂಡು ನೈಜ ಇತಿಹಾಸ, ಪರಂಪರೆಯನ್ನು ಬೌದ್ದಿಕವಾಗಿ ಬೆಳೆಸಬೇಕೆಂದು ಅವರು ತಿಳಿಸಿದರು. ರಾಷ್ಟ್ರೋತ್ಥಾನ ಪರಿಷತ್ ಈ ನಿಟ್ಟಿನಲ್ಲಿ ಪುಸ್ತಕೋತ್ಸವವನ್ನು ಹಿನ್ನೆಲೆಯಾಗಿಟ್ಟುಕೊಂಡು ಹೊಸ ಸಮಾಜ ಕಟ್ಟುವ, ಕೆರಳಿರುವಲ್ಲಿ ಅರಳಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿರುವುದು ಕ್ರಾಂತಿ ಎಂದು ಅವರು ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್ ಸಾಹಿತ್ಯ ವಿಭಾಗದ ಸಂಚಾಲಕರಾದ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಿರಿಯ ಬರಹಗಾರ, ವಾಯ್ಸ್ ಆಫ್ ಇಂಡಿಯಾದ ಕನ್ನಡ ಸರಣಿಯ ಗೌರವ ಸಂಪಾದಕರಾದ ಮಂಜುನಾಥ ಅಜ್ಜಂಪುರ ನೆನಪಿನ ಕಾಣಿಕೆಯನ್ನು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!