ಸಾಕಾನೆಗಳೊಂದಿಗೆ ಹುಲಿ ಸೆರೆಗೆ ಕಾರ್ಯಚರಣೆ ಶುರು

ಹೊಸದಿಗಂತ ವರದಿ, ಮೈಸೂರು:

ಜಿಲ್ಲೆಯ ಸರಗೂರು ತಾಲ್ಲೂಕಿನ ಮೊಳೆಯೂರು ವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ರೈತರೊಬ್ಬರನ್ನು ಕೊಂದು ತಿಂದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸುತ್ತಿದೆ. ಸಾಕಾನೆಗಳಾದ ಪಾರ್ಥ ಹಾಗೂ ಧರ್ಮ ಆನೆಗಳ ಮೂಲಕ ಹುಲಿಯನ್ನು ಪತ್ತೆ ಹಚ್ಚಿ, ಅದನ್ನು ಸೆರೆ ಹಿಡಿಯಲು ಕೂಂಬಿoಗ್ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ 30ಕ್ಕೂ ಹೆಚ್ಚು ಕ್ಯಾಮರಾ ಟ್ರಾಪ್‌ಗಳನ್ನು ಅಳವಡಿಸಿ ಹುಲಿ ಪತ್ತೆಗೆ ಮುಂದಾಗಿದ್ದಾರೆ.

ಸರಗೂರು ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(42) ಹುಲಿ ದಾಳಿಗೆ ಬಲಿಯಾದವರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ಈತ ಎಂದಿನoತೆ ಸೋಮವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮೊಳೆಯೂರು ವಲಯ ಅರಣ್ಯದಂಚಿನಲ್ಲಿರುವ ಬಿ.ಮಟಕೆರೆ-ಹೊಸಕೋಟೆ ಸಂಪರ್ಕ ರಸ್ತೆಯ ಪಕ್ಕದ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಕಾಡಿನಿಂದ ಹೊರ ಬಂದ ಹುಲಿ ದನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದರಿಂದ ಗಾಬರಿಗೊಂಡ ದನಗಳು ತಕ್ಷಣ ಚದುರಿಹೋಗಿವೆ. ಮತ್ತೆ ಹೊಂಚಿಹಾಕಿದ ಹುಲಿ ದನಗಳ ಕಾಯುತ್ತಾ ಕಾಡಿನತ್ತ ಬೆನ್ನು ಮಾಡಿ ಕುಳಿತಿದ್ದ ಬಾಲಾಜಿ ನಾಯ್ಕನ ಮೇಲೆ ದಾಳಿ ನಡೆಸಿ, ಕೊಂದಿದೆ.

ಹುಲಿ ದಾಳಿಗೆ ರೈತ ಬಾಲಾಜಿ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹುಲಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಚದುರಿದ ದನಗಳು, ಹುಲಿ ದಾಳಿ ಮಾಡಿದ ದೃಶ್ಯವನ್ನು ಪಕ್ಕದ ಜಮೀನಿನಲ್ಲಿ ದನಕಾಯುವ ವ್ಯಕ್ತಿ ಕಂಡು ಗಾಬರಿಯಿಂದ ಜೋರಾಗಿ ಚಿರಾಟ ಮಾಡಿದ್ದಾರೆ. ಇದರಿಂದ ಅಕ್ಕ, ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಒಗ್ಗೂಡಿ ಹೋಗಿ ನೋಡಲಾಗಿ ಬಾಲಾಜಿ ನಾಯ್ಕ ಅವರ ಎಡದ ಕಾಲು, ದೇಹದ ಕೆಲ ಭಾಗಗಳು, ತಲೆಯನ್ನು ಕಿತ್ತು ತಿಂದಿದೆ.

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ: ರೈತನ ಮೇಲೆ ಹುಲಿ ದಾಳಿ ನಡೆಸಿರುವ ಸ್ಥಳದಿಂದ ಮೊಳೆಯೂರು ವಲಯ ಅರಣ್ಯದ ಕಚೇರಿ ಸಮೀಪದಲ್ಲೇ ಇದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿದರು. ಇದಲ್ಲದೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡುವವರೆಗೂ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಎಚ್ಚರಿಕೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬದವರಿಗೆ ಸಾಂತ್ವಾನ ಹೇಳಿದರಲ್ಲದೆ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!