ಹೊಸದಿಗಂತ ವರದಿ, ಮೈಸೂರು:
ವೈದ್ಯರ ನಿರ್ಲಕ್ಷ್ಯದಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಕೊಡಗು ಮೂಲದ 12 ವರ್ಷದ ಬಾಲಕಿ ಮೃತಪಟ್ಟ ಪ್ರಕರಣ ಸಂಬoಧ ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಆಸ್ಪತ್ರೆಯ ವೈದ್ಯೆ ಡಾ.ಚೈತ್ರಾ ಸೇರಿ ಮೂವರ ವಿರುದ್ಧ ನಗರದ ದೇವರಾಜ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ನಾನಾ ಕಾರಣ ಹೇಳಿ ಮೈಸೂರಿನ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಹಾಗೂ ಜೆಎಸ್‌ಎಸ್ ಆಸ್ಪತ್ರೆ ವೈದ್ಯರು ದಾಖಲಿಸಿಕೊಳ್ಳದೆ ಕುಳಹಿಸಿದ್ದರು. ಬಾಲಕಿಯ ದಂಪತಿ ತಮ್ಮ ಗ್ರಾಮದವಾರ ಮೈಸೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎ.ಜೆ.ಶಿಲ್ಪಾ ಅವರ ಗಮನಕ್ಕೆ ತಮ್ಮ ಮಗಳ ಪರಿಸ್ಥಿತಿಯನ್ನು ತಂದು ಸಹಾಯ ಕೋರಿದರು. ಈ ಹಿನ್ನಲೆಯಲ್ಲಿ ಖುದ್ದು ನ್ಯಾಯಾಧೀಶರೇ ಚೆಲುವಾಂಬ ಆಸ್ಪತ್ರೆಗೆ ಆಗಮಿಸಿ, ಬಾಲಕಿಯನ್ನು ದಾಖಲಿಸಿಕೊಂಡು, ತಕ್ಷಣವೇ ಚಿಕಿತ್ಸೆ ನೀಡುವಂತೆ ಕರ್ತವ್ಯದಲ್ಲಿದ್ದ ಡಾ.ಚೈತ್ರರಿಗೆ ಸೂಚಿಸಿದ್ದರು.
ಆದರೆ ಚಿಕಿತ್ಸೆ ನೀಡಲು ಡಾ.ಚೈತ್ರ ಸೇರಿ ಮೂವರು ನಿರ್ಲಕ್ಷ್ಯ ತೋರಿದರು. ಇದರಿಂದಾಗಿ ಶಿಲ್ಪಾ ಅವರು ತಾವು ನ್ಯಾಯಾಲಯದ ನ್ಯಾಯಾಧೀಶೆ ಎಂದು ಪರಿಚಯ ಮಾಡಿಕೊಂಡರೂ, ಅವರ ಮಾತಿಗೆ ಮನ್ನಣೆ ನೀಡದೆ, ಐದು ತಾಸುಗಳ ಕಾಲ ಕಾಯಿಸಿ, ಬಾಲಕಿಗೆ ಚಿಕಿತ್ಸೆ ನೀಡದೆ ಆಟವಾಡಿಸಿದ್ದರು. ನಂತರ ನ್ಯಾಯಾಧೀಶರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ್ದರು. ಬಳಿಕ ಬಾಲಕಿಗೆ ಚಿಕಿತ್ಸೆ ನೀಡಿದರೂ, ಆಕೆ ಬದುಕಿ ಉಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಿಲ್ಪಾ ಅವರು ದೇವರಾಜ ಪೊಲೀಸ್ ಠಾಣೆಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ದೇವರಾಜ ಠಾಣೆಯ ಪೊಲೀಸರು ವೈದ್ಯೆ ಡಾ.ಚೈತ್ರ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅನ್ವಯ ಕೇಸ್ ದಾಖಲಿಸಿದ್ದಾರೆ.