ಹೊಸದಿಗಂತ ವರದಿ,ಮಡಿಕೇರಿ:
ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಮಾಜಿ ಯೋಧ ಸಂದೇಶ್ ಅವರಿಗಾಗಿ ಎರಡನೇ ದಿನವಾದ ಬುಧವಾರವೂ ಶೋಧ ಕಾರ್ಯ ನಡೆಯಿತು.
ತಡ ರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡ, ನಗರದ ಪಂಪಿನ ಕೆರೆಯಲ್ಲಿ 40 ಅಡಿ ಆಳದಲ್ಲಿ ಹೂತಿದ್ದ ಮೃತದೇಹವನ್ನು ರಾತ್ರಿ 8.20ರ ವೇಳೆಗೆ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ನಡುವೆ ಸಂದೇಶ್ ಅವರು ಬರೆದಿಟ್ಟಿರುವ ಡೆತ್ ನೋಟ್ ಬಹಿರಂಗವಾಗಿದ್ದು, ಹನಿ ಟ್ರಾಪ್ ಬಲೆಗೆ ಬಿದ್ದು ಮಾಜಿ ಸೈನಿಕ ಸಂದೇಶ್ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ತನ್ನ ಸಾವಿಗೆ ಜೀವಿತ ಮತ್ತು ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾರ್ಟ್ ಮಾಲಕ ಸತ್ಯ ಎಂಬವರು ಕಾರಣ ಎಂದು ಡೆತ್ ನೋಟ್’ನಲ್ಲಿ ಬರೆದಿಟ್ಟು ಮಂಗಳವಾರ ಸಂಜೆಯಿಂದ ಸಂದೇಶ್ ನಾಪತ್ತೆಯಾಗಿದ್ದರು.
ಅವರಿಗಾಗಿ ಹುಡುಕಾಟ ಆರಂಭಿಸಿದಾಗ, ಅವರು ಧರಿಸಿದ್ದ ಚಪ್ಪಲಿ ಹಾಗೂ ಮೊಬೈಲ್ ನಗರದ ಪಂಪಿನ ಕೆರೆ ಬಳಿ ಪತ್ತೆಯಾಗಿತ್ತು. ಆದರೆ ಕೆರೆಯಲ್ಲಿ ಭಾರೀ ಪ್ರಮಾಣದ ನೀರು ಹಾಗೂ ಹೂಳು ತುಂಬಿಕೊಂಡಿದ್ದ ಕಾರಣ ಮತ್ತು ತುಂತುರು ಮಳೆಯಿಂದಾಗಿ ಶೋಧ ಕಾರ್ಯಕ್ಕೆ ತೊಡಕಾಗಿತ್ತು.
ಬುಧವಾರ ಮತ್ತೆ ಸಂದೇಶ್’ಗಾಗಿ ಶೋಧ ನಡೆದಿದ್ದು,ರಾತ್ರಿ ವೇಳೆಗೆ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
ಈ ನಡುವೆ ಸಂದೇಶ್ ಅವರ ಈ ಕೃತ್ಯಕ್ಕೆ ಮಹಿಳೆಯೊಬ್ಬರ ಮಾನಸಿಕ ಕಿರುಕುಳ ಕಾರಣ ಎಂದು ಆರೋಪಿಸಿರುವ ಅವರ ಪತ್ನಿ, ಮಹಿಳೆಯ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಡಿಕೇರಿಯ ಉಕ್ಕುಡದ ನಿವಾಸಿ,ಮಾಜಿ ಯೋಧ ಸಂದೇಶ್ ಎಂಬವರಿಗೆ ಮಡಿಕೇರಿ ಗಣಪತಿ ಬೀದಿ ನಿವಾಸಿ ಜೀವಿತಾ ಎಂಬ ಮಹಿಳೆಯು ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಫೋನ್ ಮತ್ತು ಮೆಸೇಜ್ ಮಾಡಿಮದುವೆಯಾಗುವಂತೆ ಒತ್ತಡ ಹಾಕುವುದರೊಂದಿಗೆ ಪ್ರತಿ ತಿಂಗಳೂ 20ಸಾವಿರ ರೂ ಗಳನ್ನು ಪಡೆಯುತ್ತಿದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈವರೆಗೆ ಸುಮಾರು 15 ಲಕ್ಷಗಳವರೆಗೆ ಹಣವನ್ನು ಪಡೆದಿರುವ ಈ ಮಹಿಳೆ, ಕೆಲವು ದಿನದ ಹಿಂದೆ 50 ಲಕ್ಷ ರೂ.ನೀಡುವಂತೆ ಅಥವಾ ಮನೆ ಕಟ್ಟಿಸಿಕೊಡುವಂತೆ ಒತ್ತಡ ಹಾಕಿರುವುದಲ್ಲದೆ, ಹಣ ನೀಡದಿದ್ದಲ್ಲಿ ಖಾಸಗಿ ವಿಡಿಯೊ ಮತ್ತು ಫೋಟೋಳನ್ನು ಫೇಸ್‌ಬುಕ್’ಗೆ ಹಾಕಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿರುವುದಾಗಿಯೂ ಸಂದೇಶ್ ಅವರು ತನ್ನ ಪತ್ನಿಗೆ ತಿಳಿಸಿದ್ದರು ಎನ್ನಲಾಗಿದೆ.
ಜೀವಿತಾಳು ಬ್ಲಾಕ್‌ಮೇಲ್ ಮಾಡಿ ಮಾನಸಿಕವಾಗಿ ಹಿಂಸೆ ನೀಡಿರುವುದರಿಂದ ತನ್ನ ಪತಿ ನ.7ರಂದು ಡೆತ್‌ನೋಟ್ ಬರೆದಿಟ್ಟು ಕಾಣೆಯಾಗಿರುವುದರಿಂದ ಬ್ಲಾಕ್‌ಮೇಲ್ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ ಜೀವಿತಾ ಎಂಬ ಮಹಿಳೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಂದೇಶ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆಹಾಕಿದ್ದು, ಈ ಪ್ರಕರಣದ ತನಿಖೆಗಾಗಿ ಕುರಿತು ವಿಶೇಷ ತನಿಖಾ ತಂಡ ರಚಿಸಿದ್ದಾರೆ.
ಸಂದೇಶ್ ಪತ್ನಿ ದೂರಿನ ಆಧಾರದ ಮೇರೆಗೆ ಸದ್ಯದಲ್ಲಿಯೇ ಜೀವಿತಾ, ಡೆತ್ ನೋಟ್’ನಲ್ಲಿ ಸಂದೇಶ್ ಹೆಸರಿಸಿದ್ದ ಜೀವಿತಾಳ ತಾಯಿ ಹಾಗೂ ತಂಗಿ ಮತ್ತು ಇತರ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿಯೇ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ.