ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವ ಕಳ್ಳಸಾಗಣಿಕೆ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕರ್ನಾಟಕ, ತಮಿಳುನಾಡು ಸೇರಿ 10 ರಾಜ್ಯಗಳ ಒಟ್ಟು 55 ಸ್ಥಳಗಳಲ್ಲಿ ಬುಧವಾರ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದೆ.
ಕರ್ನಾಟಕ, ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚೇರಿ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಧ ನಡೆಸಿದೆ.
ಅಕ್ರಮ ಬಾಂಗ್ಲಾ ಪ್ರಜೆಗಳು ಸೇರಿ 44 ಅಕ್ರಮ ನಿವಾಸಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ, ಕೆ.ಆರ್.ಪುರ, ಬೆಳ್ಳಂದೂರಿನಲ್ಲಿ ಜಾಲಾಡಿದ ಅಧಿಕಾರಿಗಳು 10 ಬಾಂಗ್ಲಾ ಅಕ್ರಮ ವಾಸಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಅಕ್ರಮ ವಲಸಿಗರು ಒಳನುಸುಳುವಿಕೆ ಮತ್ತು ದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ಬೆಂಗಳೂರು, ಗುವಾಹಟಿ, ಚೆನ್ನೈ, ಜೈಪುರ ಪ್ರಾದೇಶಿಕ ಎನ್‌ಐಎ ಕಚೇರಿಗಳಲ್ಲಿ ಮಾನವ ಕಳ್ಳ ಸಾಗಾಣೆ ಪ್ರಕರಣಗಳು ದಾಖಲಾಗಿದ್ದವು.
ಸೆ.9ರಂದು ಅಸ್ಸಾಂ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎ) ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ವಲಸಿಗರ ಒಳನುಸುಳಿವಿಕೆ ಮತ್ತು ಮಾನವ ಕಳ್ಳಸಾಗಣಿಕೆ ಜಾಲ ಸಂಬಂಧ ಕಾರ್ಯಾಚರಣೆ ನಡೆಸಿ ತನಿಖೆ ನಡೆಸಿತ್ತು.ಈ ವೇಳೆ ರೋಹಿಂಗ್ಯಾ ಮೂಲದವರು ದೇಶದ ಒಳಗೆ ನುಸುಳುತ್ತಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಮಾನವ ಕಳ್ಳ ಸಾಗಾಣಿಕೆ ಜಾಲದಿಂದ ದೇಶದ ಎಲ್ಲೆಡೆ ಅಕ್ರಮವಾಗಿ ರೋಹಿಂಗ್ಯಾ ಗ್ಯಾಂಗ್ ನೆಲೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಇದು ಅಂತಾರಾಷ್ಟ್ರೀಯ ಮತ್ತು ಅಂತರ್ ರಾಜ್ಯಗಳ ನಡುವಿನ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸುಳಿವು ಲಭ್ಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅ.6ರಂದು ಗುವಾಹಟಿ ಎನ್‌ಐಎ ಠಾಣೆಯಲ್ಲಿ ಪ್ರತ್ಯೇಕ ಎಐಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.ಬಂಧಿತ ಅಕ್ರಮ ನಿವಾಸಿಗಳು ಬೇರೆ ರಾಜ್ಯ ಮತ್ತು ವಿದೇಶಿ ಪ್ರಜೆಗಳ ಜತೆಗೆ ಸಂಪರ್ಕ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರಿಂದ ಹೊಸದಾಗಿ ಮೂರು ಕೇಸ್‌ಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್, ಸಿಮ್ ಕಾರ್ಡ್ ಜಪ್ತಿ
ಡಿಜಿಟಲ್ ಡಿವೈಎಸ್, ಮೊಬೈಲ್, ಸಿಮ್ ಕಾರ್ಡ್, ಪೆನ್‌ಡ್ರೈವ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಸರ್ಕಾರದ ಗುರುತಿನ ಚೀಟಿಗಳನ್ನು ಪತ್ತೆಯಾಗಿವೆ. ಮಾನವ ಕಳ್ಳ ಸಾಗಾಣಿಕೆ ಏಜೆಂಟ್‌ಗಳ ಸಹಾಯದಿಂದ ನಕಲಿ ದಾಖಲೆಗಳನ್ನು ಸಲ್ಲಿಸಿ ಆಧಾರ್ ಮತ್ತು ಪಾನ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿದೆ. ಬಂಧಿತರ ಬಳಿ 20 ಲಕ್ಷ ರೂ. ನಗದು ಮತ್ತು 4550 ಯುಎಸ್ ಡಾಲರ್ ಸಹ ಪತ್ತೆಯಾಗಿದೆ.
ತ್ರಿಪುರಾದಲ್ಲಿ 21, ಕನಾರ್ಟಕದಲ್ಲಿ 10, ಅಸ್ಸಾಂ 5, ಪಶ್ಚಿಮ ಬಂಗಾಳ 3, ತಮಿಳುನಾಡು 2 ಮತ್ತು ಹರಿಯಾಣ, ಪುದುಚೇರಿ, ತೆಲಂಗಾಣದಲ್ಲಿ ತಲಾ ಓರ್ವ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾನವ ಕಳ್ಳಸಾಗಾಣೆ ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
https://twitter.com/NIA_India/status/1722235072072556756