ಮಹುವಾ ಮೊಯಿತ್ರಾ ವಿರುದ್ಧ ನಡೆಯುತ್ತಿರುವುದು ರಾಜಕೀಯ ದ್ವೇಷ: ಅಭಿಷೇಕ್​ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪರವಾಗಿ ತೃಣಮೂಲ ಕಾಂಗ್ರೆಸ್​ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಮಾತನಾಡಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ ನೀಡಿದ್ದ ಹಿನ್ನೆಲೆ ಗುರುವಾರ ಮಧ್ಯಾಹ್ನ ಕೋಲ್ಕತ್ತಾದ ಸಿಜಿಒ ಕಾಂಪ್ಲೆಕ್ಸ್​​ನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ತೃಣಮೂಲ ಕಾಂಗ್ರೆಸ್​ ನಾಯಕ ಅಭಿಷೇಕ್​ ಬ್ಯಾನರ್ಜಿ ಹಾಜರಾಗಿದ್ದರು.
ಈ ವೇಳೆ ಮಾತನಾಡಿದ ಅವರು, ಲೋಕಸಭೆ ನೈತಿಕ ಸಮಿತಿಯ ಅಧ್ಯಕ್ಷರು ತನಿಖೆ ಮಾಡಬೇಕು ಎಂದು ಬರೆದಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದ್ದರೆ, ಸಂಸದೆ ಸ್ಥಾನದಿಂದ ಉಚ್ಛಾಟಿಸಲು ಶಿಫಾರಸು ಮಾಡಲು ಹೇಗೆ ಸಾಧ್ಯ ಎನ್ನುವುದು ನನ್ನ ಪ್ರಶ್ನೆ. ಯಾವುದನ್ನೂ ಸಾಬೀತು ಪಡಿಸದೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಈ ಮೂಲಕ ಟಿಎಂಸಿ ಹೈಕಮಾಂಡ್​ ಸಂಸದೆ ಮಹುವಾ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ಲಂಚ ಪಡೆದಿರುವ ಆರೋಪದ ಬಗೆಗಿನ ಪ್ರಶ್ನೆಗೆ ಇದುವರೆಗೆ ತೃಣಮೂಲ ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂದು ಮಾಧ್ಯಮಗಳು ಮಹುವಾ ಅವರ ಬಗ್ಗೆ ಕೇಳಿದ ಪ್ರಶ್ನಿಗೆ ಉತ್ತರಿಸಿದ ಬ್ಯಾನರ್ಜಿ,ಮಹುವಾ ವಿರುದ್ಧ ನಡೆಯುತ್ತಿರುವುದು ರಾಜಕೀಯ ದ್ವೇಷ. ಈ ಯುದ್ಧದಲ್ಲಿ ಮಹುವಾ ಅವರು ಸ್ವತಃ ಏಕಾಂಗಿಯಾಗಿ ಹೋರಾಡಲು ಸಮರ್ಥರು ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಯಾರಾದರೂ ಅದಾನಿ ಅಥವಾ ಕೇಂದ್ರದ ಬಗ್ಗೆ ಪ್ರಶ್ನಿಸಿದರೆ ಅವರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಲೋಕಸಭಾ ನೈತಿಕ ಸಮಿತಿಗೆ ನನ್ನ ಹಲವು ಪ್ರಶ್ನೆಗಳಿವೆ. ನೂತನ ಸಂಸತ್​ ಭವನ ಉದ್ಘಾಟನೆ ವೇಳೆ ಬಿಜೆಪಿ ಸಂಸದ ರಮೇಶ್​ ವಿದುರಿ ಅವರು ಸಂಸತ್ತಿನ ಘನತೆಗೆ ಚ್ಯುತಿ ತರುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ರೀತಿಯನ್ನು ನೀವು ನೋಡಿದ್ದೀರಿ. ಈ ರೀತಿ ಬಿಜೆಪಿಯ ಹಲವು ಸಂಸದರ ವಿರುದ್ಧ ಹಕ್ಕುಗಳ ಉಲ್ಲಂಘನೆಯ ಕುರಿತು ಎಲ್ಲೂ ಚರ್ಚೆಯಾಗುತ್ತಿಲ್ಲ. ಆದರೆ ಯಾರಾದರೂ ಸರ್ಕಾರದ ವಿರುದ್ಧ ಪ್ರಶ್ನಿಸಲು, ಹೋರಾಡಲು ಬಯಸಿದರೆ ಅಥವಾ ಅದಾನಿ ಬಗ್ಗೆ ಪ್ರಶ್ನಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೈತಿಕ ಸಮಿತಿ ಸಂಸದರ ವಿರುದ್ಧ ಯಾವುದೇ ದೋಷಾರೋಪಣೆಯ ಸಾಕ್ಷ್ಯ ಹೊಂದಿಲ್ಲದಿದ್ದರೆ, ಅವರ ಸದಸ್ಯತ್ವವನ್ನು ವಜಾಗೊಳಿಸಲು ಹೇಗೆ ಶಿಫಾರಸು ಮಾಡುತ್ತದೆ” ಎಂದು ಅಭಿಷೇಕ್​ ಪ್ರಶ್ನಿಸಿದ್ದಾರೆ.

ಇಡಿಗೆ 6000 ಪುಟಗಳ ಪ್ರತಿಕ್ರಿಯೆ ಸಲ್ಲಿಸಿದ ಬ್ಯಾನರ್ಜಿ:
ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಇಡಿ ಎದುರು ಮುಚ್ಚಿಡಲು ಏನೂ ಇಲ್ಲ. ಎಲ್ಲಾ ರೀತಿಯಲ್ಲೂ ಸಹಕರಿಸಲು ನಾನು ಸಿದ್ಧ. ಸುಮಾರು 6000 ಪುಟಗಳ ಪ್ರತಿಕ್ರಿಯೆಯನ್ನು ಇಡಿಗೆ ಸಲ್ಲಿಸಲಾಗಿದೆ. ತನಿಖಾ ಸಂಸ್ಥೆ ಕೇಳಿರುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲಾಗಿದೆ. ಸಮನ್ಸ್​ ನೀಡಿದರೆ ನಾನು ಮತ್ತೆ ಇಡಿ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!