ಹೊಸದಿಗಂತ ವರದಿ, ಮಂಡ್ಯ :
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಯಾರೂ ನನಗೆ ಸೂಚನೆ ಕೊಟ್ಟಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಇದರಲ್ಲಿ ಯಾರದ್ದೇ ಹಸ್ತಕ್ಷೇಪ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನ ಸಿದ್ದೇಗೌಡನದೊಡ್ಡಿಯಲ್ಲಿ ಬರ ಅಧ್ಯಯನ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದು ನನಗೆ ಗೊತ್ತಿಲ್ಲ. ಈ ರೀತಿ ಅವರು ಹೇಳಲು ಸಾಧ್ಯವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ, ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಗಿದ್ದೆ, ಕೇಂದ್ರ ಸರ್ಕಾರದಲ್ಲಿ ಏಳು ವರ್ಷ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಿದ್ದೇನೆ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೆ. ರಾಜ್ಯ ಅಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ ರಾಜಕೀಯದಲ್ಲಿ ಇಷ್ಟು ಮಾತ್ರ ಸಾಕಲ್ಲವೇ ಎಂದು ಪ್ರಶ್ನಿಸಿದರು.
ರಾಜಕಾರಣಕ್ಕೆ ಪ್ರವೇಶಿಸಿ 25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕೆಂದು ಚಿಂತನೆ ಮಾಡಿದ್ದು ನಿಜ. ಆದರೆ ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಈ ಬಾರಿ ಆರು ತಿಂಗಳ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇದರಿಂದ ಪಕ್ಷಕ್ಕೆ ಹೊಸಬರನ್ನು ಹುಡುಕಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು.