ಹೊಸದಿಗಂತ ವರದಿ,ಮದ್ದೂರು:
ತಾಲೂಕಿನ ಆತಗೂರು ಹೋಬಳಿಗೆ ಗುರುವಾರ ಬರಪರಿಸ್ಥಿತಿ ಅಧ್ಯಯನ ನಡೆಸಲು ಆಗಮಿಸಿದ್ದ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡರಿಗೆ ಅರಕನಹಳ್ಳಿ ಗ್ರಾಮದ ಯುವ ರೈತನೋರ್ವ ಕುರಿಯನ್ನು ಉಡುಗೊರೆಯಾಗಿ ನೀಡಿದ ಪ್ರಸಂಗ ಜರುಗಿತು.
ಗ್ರಾಮದ ಚಿರತೆ ಹಾವಳಿಯಿಂದ ಜಾನುವಾರು ಕಳೆದುಕೊಂಡಿದ್ದ ರೈತರ ಮನೆಗಳಿಗೆ ಭೇಟಿ ನೀಡಿ ತೆರಳುತ್ತಿದ್ದ ವೇಳೆ, ಯುವ ರೈತ ಎಚ್.ಆರ್. ರಂಜಿತ್ 5 ತಿಂಗಳ ಕುರಿಮರಿಯನ್ನು ಸದಾನಂದಗೌಡರಿಗೆ ಉಡುಗೊರೆ ನೀಡಿದರು.
ಇದರಿಂದ ಸಂತೋಷಗೊಂಡ ಸದಾನಂದಗೌಡರು, ನೀವೇ ಚೆನ್ನಾಗಿ ಸಾಕಿ ಬೆಳೆಸಿ, ಇದೇ ಕುರಿ ಮಾಂಸದೂಟಕ್ಕಾಗಿ ತಮ್ಮ ಗ್ರಾಮಕ್ಕೆ ಬರುವುದಾಗಿ ಭರವಸೆ ನೀಡಿದರು.
ನಂತರ ಸ್ಥಳದಲ್ಲಿದ್ದ ಬಿಜೆಪಿ ಮುಖಂಡರುಗಳು ರಂಜಿತ್ ತಮ್ಮ ಮೇಲೆ ವಿಶ್ವಾಸವಿಟ್ಟು ಕುರಿಯನ್ನು ನೀಡಿದ್ದಾರೆ. ಅದು ನಿಮ್ಮ ಮನೆಗೇ ತೆಗೆದುಕೊಂಡು ಹೋಗಿ ಸಾಕಿ ಎಂದು ಸಲಹೆ ನೀಡಿದರು.
ಇದಕ್ಕೆ ಸದಾನಂದಗೌಡರು ಸಮ್ಮತಿ ಸೂಚಿಸಿದರು. ನಂತರ ಬೆಂಗಳೂರಿನಲ್ಲಿರುವ ತಮ್ಮ ಆಪ್ತ ಸಹಾಯಕರ ವಶಕ್ಕೆ ಒಪ್ಪಿಸುವಂತೆ ಬಿಜೆಪಿ ಮುಖಂಡರು ಸಲಹೆ ನೀಡಿದ ನಂತರ ನಾಳೆ ಬೆಂಗಳೂರಿಗೆ ಕುರಿಮರಿಯನ್ನು ಕೊಂಡೊಯ್ಯಲಾಗುತ್ತದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ಅಶ್ವತ್ಥನಾರಾಯಣ, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮನ್‌ಮುಲ್‌ನಿರ್ದೇಶಕರಾದ ಎಸ್.ಪಿ. ಸ್ವಾಮಿ, ರೂಪ, ಜಿಲ್ಲಾ ಸಮಿತಿ ಮುಖಂಡ ಎಂ. ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವದಾಸ್ ಸತೀಶ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಮುಖಂಡರಾದ ಎಂ.ಸಿ. ಸಿದ್ದರು, ಬಿ.ಸಿ. ಮಹೇಂದ್ರ ಇತರರು ಇದ್ದರು.