ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ನಲ್ಲಿ ತನ್ನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಕರ್ನಾಟಕದ ಮೂಲದವರು ಎಂದು ಎಲ್ಲರಿಗು ಗೊತ್ತೇ ಇರುವ ವಿಚಾರ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಚಿನ್ ರವೀಂದ್ರ ಅವರಿಗೆ ಬೆಂಗಳೂರಿನ ಮನೆಯಲ್ಲಿ ಅಜ್ಜಿ ದೃಷ್ಟಿ ತೆಗೆದ ವಿಡಿಯೋವೊಂದು ವೈರಲ್ ಆಗಿದೆ.
ಕರ್ನಾಟಕದ ಮೂಲದ ರಚಿನ್ ಪೋಷಕರು ನ್ಯೂಜಿಲೆಂಡ್ನಲ್ಲಿ ನೆಲೆಸಿದ್ದರೂ, ಅವರ ಅಜ್ಜ – ಅಜ್ಜಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಮನೆಗೆ ಭೇಟಿ ನೀಡಿದಾಗ ಅಜ್ಜ-ಅಜ್ಜಿ ರಚಿನ್ ಅವರ ದೃಷ್ಟಿ ತೆಗೆದಿದ್ದಾರೆ.
ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಕ್ರಿಕೆಟಿಗ ರಚಿನ್ ರವೀಂದ್ರ ಭಾರತದ ಪ್ರವಾಸದಲ್ಲಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ಬೆಂಗಳೂರಿಗೆ ನ್ಯೂಜಿಲೆಂಡ್ ತಂಡ ಆಗಮಿಸಿತ್ತು. ರಚಿನ್ ರವೀಂದ್ರ ಅವರ ಅಜ್ಜ ಟಿಎ ಬಾಲಕೃಷ್ಣ ಅಡಿಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ, ತನ್ನ ಅಜ್ಜ-ಅಜ್ಜಿಯ ಮನೆಗೆ ಕಿವೀಸ್ ಆಲ್‌ರೌಂಡರ್ ಭೇಟಿ ನೀಡಿದ್ದಾರೆ. ಈ ಸಂದರ್ಭಲ್ಲಿ ಅಜ್ಜಿ ಪೂರ್ಣಿಮಾ ಅಡಿಗ ಅವರು ಮೊಮ್ಮಗ ರಚಿನ್ ರವೀಂದ್ರ ಅವರಿಗೆ ದೃಷ್ಟಿ ತೆಗೆದಿದ್ದಾರೆ.
ಮನೆಯಲ್ಲಿ ರಚಿನ್ ರವೀಂದ್ರ ಸೋಫಾದಲ್ಲಿ ಕುಳಿತಿದ್ದು, ಅಜ್ಜಿ ಪೂರ್ಣಿಮಾ ನಿಂಬೆ, ಸಾಸಿವೆ ಮತ್ತು ಉಪ್ಪಿನಂತಹ ಪದಾರ್ಥಗಳ ಹಿಡಿದು ಮಂತ್ರಗಳ ಪಠಿಸುತ್ತಾ, ದೃಷ್ಟಿ ತೆಗೆಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ನ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ದೊಡ್ಡ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ಮಗನಿಗೆ ರಾಹುಲ್ ಹೆಸರಿನ ‘ರಾ’ ಮತ್ತು ಸಚಿನ್ ಹೆಸರಿನ ‘ಚಿನ್’ ಸೇರಿ ರಚಿನ್ ಎಂದು ಹೆಸರಿಟ್ಟಿದ್ದಾರೆ.