ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿ ಮಹಾಶಯನೊಬ್ಬ ಜೂಜಾಟಕ್ಕೆ ತನ್ನ ಪತ್ನಿಯನ್ನು ಪಣಕ್ಕಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ರಾಜ್ಯದ ಡಿಡೋಲಿ ಕೊಟ್ವಾಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು, ತನ್ನ ಮಗಳನ್ನು ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಯುವಕನಿಗೆ ಮದುವೆ ಮಾಡಿಕೊಟ್ಟರು. ಮದುವೆಯಾಗಿ ಮೂರು ವರ್ಷಗಳಾದರೂ ಆಕೆಗೆ ಗಂಡನ ಮನೆಯಲ್ಲಿನ ಕಷ್ಟಗಳು ಮಾತ್ರ ತಪ್ಪಲಿಲ್ಲ.
ಚಟಗಳಿಗೆ ದಾಸನಾದ ಗಂಡ, ಹಣಕ್ಕಾಗಿ ಪೀಡಿಸುತ್ತಾ ಸದಾ ಒಂದಿಲ್ಲೊಂದು ಗಲಾಟೆ ಮಾಡುತ್ತಲೇ ಇದ್ದ. ಇತ್ತ ಹೆತ್ತವರಿಗೆ ಹೇಳಲಾಗದೆ ನೋವು ನುಂಗಿಕೊಂಡಿದ್ದ ಆ ಹೆಣ್ಣುಮಗಳಿಗೆ 15 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಬೇಡಿಕೆಯಿಟ್ಟಿದ್ದ. ಹೀಗಿರುವಾಗ ಒಂದು ದಿನ ಪತಿ ಪತ್ನಿಯನ್ನು ತನ್ನೊಂದಿಗೆ ದೆಹಲಿಗೆ ಕರೆದೊಯ್ದ. ಅಲ್ಲಿಯೂ ಜೂಜಾಡಿ ಸೋತು ಹಣ ಕೊಡಲಾಗದೆ, ತನ್ನ ಪತ್ನಿಯನ್ನು ಹಣ ತಾನು ಸಾಲ ಇದ್ದವರ ಬಳಿ ಬಿಟ್ಟು ಬಂದಿದ್ದಾನೆ.
ತಂಗಿಯ ವಿಚಾರ ತಿಳಿದ ಆಕೆಯ ಅಣ್ಣ ದೆಹಲಿಗೆ ಹೋಗಿ ಅವರಿಗೆ ಕೊಡಬೇಕಾದ ಹಣವನ್ನು ಕೊಟ್ಟು, ತನ್ನ ಬಾವನಿಗೆ ಬುದ್ದಿ ಹೇಳಿ ತಂಗಿಯನ್ನು ಮತ್ತೆ ಗಂಡನ ಮನೆ ಸೇರಿಸಿ ಬಂದಿದ್ದ. ಆದರೆ, ಇಷ್ಟು ದಿನ ನೀನು ಬೇರೆಯವರ ಜೊತೆ ಇದ್ದೀಯ..ನಿನಗೆ ನಮ್ಮ ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಅತ್ತೆ-ಮಾವ ಆಕೆಯನ್ನು ಹೊಡೆದು ಮನೆಯಿಂದ ಹೊರ ಹಾಕಿದ್ದಾರೆ.
ಒಬ್ಬಳೇ ಇದ್ದುದನ್ನು ಕಂಡ ಮೈದುನ ಈ ಹೆಣ್ಣುಮಗಳ ಮೇಲೆ ಕಣ್ಣಾಕಿದ್ದಾನೆ. ಆಕೆಯ ಅಹಸನೀಯ ಪರಿಸ್ಥಿತಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಲು ಶುರುವಿಟ್ಟುಕೊಂಡ. ದೌರ್ಜನ್ಯ ಸಹಿಸಲಾಗದೆ ಈ ಹೆಣ್ಣುಮಗಳು ತನ್ನೆಲ್ಲಾ ದುಃಖವನ್ನು ಪೊಲೀಸರ ಮುಂದೆ ತೋಡಿಕೊಂಡಳು.ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಇತರ ಒಂಬತ್ತು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಅರೆಸ್ಟ್ ಮಾಡಿದ್ದಾರೆ.