ಹೊಸದಿಗಂತ ವರದಿ, ಚಿಕ್ಕಮಗಳೂರು:
ನರಕ ಚತುರ್ದಶಿ ಅಂಗವಾಗಿ ತಾಲ್ಲೂಕಿನ ಮಲ್ಲೇನಹಳ್ಳಿ ಬಿಂಡಿಗಾ ಶ್ರೀ ದೇವೀರಮ್ಮ ಬೆಟ್ಟವನ್ನೇರಿದ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ಶನಿವಾರ ರಾತ್ರಿಯಿಂದಲೇ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಆಗಮಿಸಿದ ಭಕ್ತರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮೊನಚಾದ ಬೆಟ್ಟವನ್ನು ಹರಸಾಹಸ ಪಟ್ಟು ಹತ್ತಿದರು. ಇನ್ನೂ ಹಲವರು ಬೆಳಗಿನ ಜಾವದಿಂದ ಬೆಟ್ಟ ಹತ್ತಲಾರಂಭಿಸಿದರು. ಮಹಿಳೆಯರು, ಮಕ್ಕಳು, ವಯೋ ವೃದ್ಧರಾಗಿಯಾಗಿ ಸಹಸ್ರಾರು ಯುವಕ ಯುವತಿಯರು ಬರಿಗಾಲಿನಲ್ಲಿ ಬೆಟ್ಟ ಹತ್ತಿದರು.
ಹರಕೆ ಹೊತ್ತ ಭಕ್ತರು ಬೆಟ್ಟದ ಬುಡದಿಂದ ಹೆಗಲ ಮೇಲೆ ಮಾಪು (ಮರದ ದಿಮ್ಮಿ) ಗಳನ್ನು ಹೊತ್ತು ಬೆಟ್ಟವನ್ನೇರಿ ಅಗ್ನಿಕುಂಡಕ್ಕೆ ಸಮರ್ಪಿಸಿ ಹರಕೆ ತೀರಿಸಿದರು.
ಬೆಟ್ಟದ ಕಡಿದಾದ ದಾರಿಯನ್ನು ಕುರುಚಲಿನ ಸಹಕಾರದಿಂದ ಜನರು ಬೆಟ್ಟ ಹತ್ತಿದರು. ಸ್ವಲ್ಪ ಎಚ್ಚರ ತಪ್ಪಿದರೂ ಪಾತಾಳಕ್ಕೆ ಕುಸಿದು ಬೀಳುವ ಆತಂಕದಲ್ಲೇ ಜೀವ ಕೈಯಲ್ಲಿಡಿದು ಹರಸಾಹಸ ಪಟ್ಟು ಮೇಲೇರಿದರು.
ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ಮಾಜಿ ಶಾಸಕ ಸಿ.ಟಿ.ರವಿ ಅವರು ಪ್ರತ್ಯೇಕವಾಗಿ ಆಗಮಿಸಿ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದರು. ಅವರೊಂದಿಗೆ ಇತರೆ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.
ಬೆಳಗಾಗುದ್ದಂತೆ ಬೆಟ್ಟದ ತುದಿಯಲ್ಲಿರುವ ದೇವಿಯ ಮಂದಿರದೆದುರು ಸಾವಿರಾರು ಭಕ್ತರು ಜಮಾಯಿಸಿದ್ದರು. ಒಮ್ಮೊಮ್ಮೆ ಇಡೀ ಭಕ್ತರ ದಂಡು ಜೇನು ಗೂಡು ಅಲುಗಾಡಿದಂತೆ ಭಾಸವಾಗುತ್ತಿತ್ತು.
ಎಲ್ಲರೂ ಅಪರಿಚಿತರು, ಪರಿಚಿತರೆನ್ನದೆ ಒಂದು ಕುಟುಂಬದವರಂತೆ ಪರಸ್ಪರ ಕೈಗಳನ್ನು ಹಿಡಿದು ಬೆಟ್ಟ ಹತ್ತಿದರು. ದಣಿವಾಗಿ ಬೆಟ್ಟದ ದಾರಿಯಲ್ಲಿ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು, ಮುಂದೆ ಹೆಜ್ಜೆ ಇಡಲಾಗದೆ ಸಂಕಷ್ಟಕ್ಕೆ ಸಿಕ್ಕಿದವರಿಗೆ ಇತರರು ಸ್ವಯಂಪ್ರೇರಿತವಾಗಿ ಸಹಾಯ ಹಸ್ತ ಚಾಚಿದ್ದು ಕಂಡು ಬಂತು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಮಳೆ ಸುರಿದಿತ್ತಾದರೂ ಬೆಟ್ಟ ಹತ್ತುವವರಿಗೆ ಯಾವುದೇ ಸಮಸ್ಯೆಗಳು ತಲೆ ದೋರಲಿಲ್ಲ.
ಶ್ರೀ ದೇವೀರಮ್ಮ ದೇವಾಲಯ ಸಮಿತಿಯ ಪದಾಧಿಕಾರಿಗಳು ಮತ್ತು ಮಲ್ಲೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ದೇವಿಯ ದರ್ಶನಕ್ಕೆ ಅನುಕೂಲವಾಗುವಂತೆ ಭಕ್ತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು.
ಭಕ್ತರು ತಂದಿದ್ದ ಮಾಪು, ಸೀರೆ, ಕುಪ್ಪಸ ಇತ್ಯಾದಿ ವಸ್ತುಗಳನ್ನು ಬೆಟ್ಟದ ತುದಿಯಲ್ಲಿ ಒಗ್ಗೂಡಿಸಿ ನರಕ ಚತುರ್ದಶಿ ದಿನದಂದು ರಾತ್ರಿ ೭ ಗಂಟೆಗೆ ಸುಡಲಾಯಿತು. ರಾತ್ರಿ ನಗರ ಸೇರಿದಂತೆ ಸುತ್ತಲ ಗ್ರಾಮಸ್ಥರು ಬೆಟ್ಟದ ಮೇಲೆ ಕಾಣುವ ದೀಪವನ್ನು ಕಂಡು ಪುನೀತರಾದರು.
ಸುಮಾರು ೮೦೦ ವರ್ಷಗಳ ಇತಿಹಾಸವಿರುವ ದೇವೀರಮ್ಮ ಬೆಟ್ಟದಲ್ಲಿ ನರಕ ಚತುದರ್ಶಿಯಂದು ಹಚ್ಚುವ ದೀಪವನ್ನು ಮೈಸೂರು ಅರಮನೆಯಲ್ಲಿ ಕುಳಿತು ಅಂದಿನ ಮಹಾರಾಜರು ವೀಕ್ಷಿಸುತ್ತಿದ್ದರು ಎಂಬ ಪ್ರತೀತಿ ಇದೆ.
ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಮಾತ್ರ ಒಂದು ತಿಂಗಳ ಕಾಲ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಉಳಿದಂತೆ ಬೆಟ್ಟದಲ್ಲಿರುವ ದೇವಾಲಯದಲ್ಲಿ ಯಾವ ದಿನಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ.
ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರನ್ನು ಬೆಟ್ಟಕ್ಕೆ ಕರೆದ್ಯೊಯ್ಯುವ ಸಲುವಾಗಿ ಕೆ.ಎಸ್.ಆರ್.ಟಿ.ಸಿ. ವತಿಯಿಂದ ವಿಶೇಷ ಬಸ್ನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಬೆಟ್ಟದ ಮೇಲೆ ತೆಂಗಿನ ಕಾಯಿ ಹೊಡೆಯುವುದನ್ನು ನಿಷೇದಿsಸಲಾಗಿತ್ತು. ಮಲ್ಲೇನಹಳ್ಳಿಯ ಬಿಂಡಿಗಾ ದೇವಾಲಯದಲ್ಲಿ ಹಣ್ಣುಕಾಯಿ ಮಾಡಿಸಲು ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿ ಜಿಲ್ಲಾ ಪೊಲೀಸ್ ಇಲಾಖೆಯು ವಾಹನ ದಟ್ಟಣ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಸ್ವತಃ ಎಸ್ಪಿ ವಿಕ್ರಮ ಆಮಟೆ ಅವರು ಒಂದು ದಿನ ಮೊದಲೇ ಬೆಟ್ಟವನ್ನೇರಿ ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿದ್ದರು. ಈ ಬಾರಿ ಪಾರ್ಕಿಂಗ್ ಸೇರಿದಂತೆ ಟ್ರಾಫಿಕ್ ನಿರ್ವಹಣೆ ಉತ್ತಮವಾಗಿತ್ತು.