ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನ್ಮ ನೀಡಿದ ಕೇವಲ 10 ಗಂಟೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹಸುಗೂಸನ್ನು ಉಳಿಸಲು ಇಡೀ ಜಿಲ್ಲಾಡಳಿತ ಮತ್ತು ಆಂಬುಲೆನ್ಸ್ ಚಾಲಕರ ಸಂಘಟನೆ ಅದ್ಭುತ ಸಾಹಸವನ್ನೇ ಮಾಡಿದೆ. ಕರುಳು ಹೊರಬಂದ ಸ್ಥಿತಿಯಲ್ಲಿ ಜನಿಸಿದ್ದ ಗಂಡು ಮಗುವನ್ನು ‘ಝೀರೋ ಟ್ರಾಫಿಕ್’ ಮೂಲಕ ಕೇವಲ ಒಂದು ಗಂಟೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತಲುಪಿಸಿ ಮರುಜನ್ಮ ನೀಡಲಾಗಿದೆ.
ಕುಕನೂರು ತಾಲೂಕಿನ ಗುತ್ತೂರು ಗ್ರಾಮದ ಮಲ್ಲಪ್ಪ ಮತ್ತು ವಿಜಯಲಕ್ಷ್ಮಿ ದಂಪತಿಗೆ ನಿನ್ನೆ ರಾತ್ರಿ ಕುಕನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ, ದುರದೃಷ್ಟವಶಾತ್ ಹೆರಿಗೆಯ ವೇಳೆ ಮಗುವಿನ ಕರುಳು ಹೊರಬಂದಿದ್ದು, ಮಗುವಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ತಕ್ಷಣ ಮಗುವನ್ನು ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.
ಮಗುವಿನ ಪ್ರಾಣ ಉಳಿಸಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ವೈದ್ಯರು ಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದೊಯ್ಯಲು ಸೂಚಿಸಿದರು. ಕೊಪ್ಪಳದಿಂದ ಹುಬ್ಬಳ್ಳಿಗೆ ಇರುವ 120 ಕಿಲೋಮೀಟರ್ ದೂರವನ್ನು ಕ್ರಮಿಸಲು ಸಾಮಾನ್ಯವಾಗಿ ಕನಿಷ್ಠ 2.5 ಗಂಟೆ ಬೇಕಾಗುತ್ತದೆ. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಪ್ರತಿ ನಿಮಿಷವೂ ಅಮೂಲ್ಯವಾಗಿತ್ತು.
ಪೊಲೀಸ್ ಇಲಾಖೆ ಹಾಗೂ ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಸಂಘಟನೆಯ ಸಹಯೋಗದಲ್ಲಿ ತಕ್ಷಣವೇ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಯಿತು. ದಾರಿಯುದ್ದಕ್ಕೂ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹಂತ ಹಂತವಾಗಿ ಒಟ್ಟು 30 ಅಂಬುಲೆನ್ಸ್‌ಗಳ ಸಹಾಯ ಪಡೆಯಲಾಯಿತು.
ಸಾಮಾನ್ಯವಾಗಿ 150 ನಿಮಿಷ ಬೇಕಾಗುವ ಹಾದಿಯನ್ನು, ಚಾಲಕರ ಕೌಶಲ ಮತ್ತು ಪೊಲೀಸರ ಸಹಕಾರದಿಂದ ಕೇವಲ 60 ನಿಮಿಷಗಳಲ್ಲಿ ಕ್ರಮಿಸಿ ಮಗುವನ್ನು ಆಸ್ಪತ್ರೆಗೆ ತಲುಪಿಸಲಾಯಿತು.
ಪ್ರಸ್ತುತ ಮಗುವಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮಗುವಿನ ಪ್ರಾಣ ಉಳಿಸಲು ಶ್ರಮಿಸಿದ ವೈದ್ಯರು, ಪೊಲೀಸರು ಮತ್ತು ಆಂಬುಲೆನ್ಸ್ ಚಾಲಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

