ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್‌ಶರಣ್ ಶಾಹಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯಾಜ್ಞವಲ್ಕ್ಯ ಶುಕ್ಲಾ ಅವರು ಪುನರಾಯ್ಕೆಯಾಗಿದ್ದಾರೆ.
ದಿಲ್ಲಿಯಲ್ಲಿ ಡಿ.7 ರಿಂದ10 ರವರೆಗೆ ನಡೆಯಲಿರುವ ಎಬಿವಿಪಿಯ 69 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ,ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದಾಗಿ ಚುನಾವಣಾ ಅಧಿಕಾರಿ ಸಿ.ಎನ್.ಪಟೇಲ್ ಅವರು ಎಬಿವಿಪಿಯ ಮುಂಬೈ ಕೇಂದ್ರ ಕಚೇರಿಯಿಂದ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಹಿ ಅವರು ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯವರಾಗಿದ್ದು, ಅವರು ಲಕ್ನೋದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಶಿಕ್ಷಣ ಇಲಾಖೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದು ಪಿಎಚ್‌ಡಿ ಪದವೀಧರರಾಗಿದ್ದಾರೆ. ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಮಿತಿಯ ಸದಸ್ಯರಾಗಿರುವುದು ಸೇರಿದಂತೆ ಅನೇಕ ಶೈಕ್ಷಣಿಕ ಯೋಜನೆಗಳಲ್ಲಿ ತೊಡಗಿಕೊಂಡಿರುವ ಶಿಕ್ಷಣ ತಜ್ಞರಾಗಿದ್ದಾರೆ.
ಶುಕ್ಲಾ ಅವರು ಜಾರ್ಖಂಡ್‌ನ ಘರ್‍ವಾ ಜಿಲ್ಲೆಯವರಾಗಿದ್ದು, ರಾಂಚಿ ವಿಶ್ವವಿದ್ಯಾಲಯದಿಂದ ಜಿಯಾಗ್ರಫಿಯಲ್ಲಿ ಪಿಎಚ್‌ಡಿ ಪದವಿ ಪಡೆದವರಾಗಿದ್ದಾರೆ. ಅವರು ಘರ್‍ವಾದಲ್ಲಿನ ಶ್ರೀ ಜಗಜಿತ್ ಸಿಂಗ್ ನಾಮ್‌ಧಾರಿ ಕಾಲೇಜಿನ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರೂ ಆಗಿದ್ದು, ರಾಂಚಿ ವಿಶ್ವವಿದ್ಯಾಲಯದ ಸ್ಟೂಡೆಂಟ್ಸ್ ಯೂನಿಯನ್‌ನ ಉಪಾಧ್ಯಕ್ಷರಾಗಿದ್ದಾರೆ.