ಹೊಸದಿಗಂತ ವರದಿ, ಮೈಸೂರು:
ದಕ್ಷಿಣಾಕಾಶಿ ಎಂದೇ ಪ್ರಸಿದ್ದವಾಗಿರುವ ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಚಿಕ್ಕಜಾತ್ರಾ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉದ್ಘೋಷ, ಜಯಘೋಷ ಜೈಕಾರದ ನಡುವೆ ವೈಭವಯುತವಾಗಿ ನೆರವೇರಿತು.
ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸಂಭ್ರಮ, ಸಡಗರದಿಂದ ಪಾಲ್ಗೊಂಡು ರಥೋತ್ಸವಗಳ ವೈಭವವನ್ನು ಕಂಡು ಭಕ್ತಿಯಿಂದ ಹಣ್ಣು ಧವನ ಎಸೆದು ಹರಕೆ ತೀರಿಸಿದರು.
ಚಿಕ್ಕಜಾತ್ರಾ ಮಹೋತ್ಸದ ಅಂಗವಾಗಿ ಬೆಳಿಗ್ಗೆ 4 ಗಂಟೆಯಿoದಲೇ ದೇವಾಲಯದಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿಯವರಿಗೆ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ಹಾಗೂ ಮಹಾನ್ಯಾಸ ಪೂರ್ವಕವಾಗಿ ರುದ್ರಾಭಿಷೇಕವನ್ನು ನೆರವೇರಿಸಲಾಯಿತು.
ನಂತರ ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ಧೀಕ್ಷಿತ್ ರವರ ನೇತೃತ್ವದಲ್ಲಿ ಪ್ರಾತಃಕಾಲಪೂಜೆ, ನಿತ್ಯೋತ್ಸವ, ಹಾಗೂ ಸಂಗಮಕಾಲಪೂಜೆ, ಮಾಧ್ಯಾನಕಾಲ ಪೂಜೆಯೊಂದಿಗೆ ಮಹಾಮಂಗಳಾರತಿಯನ್ನು ನೆರವೇರಿಸಿದ ಬಳಿಕ ದೇವಾಲಯದ ಒಳಾವರಣದಲ್ಲಿ ಗಣಪತಿಪೂಜೆ, ನವಗ್ರಹಪೂಜೆ, ಸ್ವಾಮಿಯವರ ಉತ್ಸವವನ್ನು ನೆರವೇರಿಸಿದ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ, ಬೆಳಿಗ್ಗೆ 10.45 ರಿಂದ 11.45 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ರಥೋತ್ಸವದಲ್ಲಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಬೆಳಿಗ್ಗೆ 11.20ಕ್ಕೆ ಶಾಸಕ ದರ್ಶನ್‌ಧ್ರುವನಾರಾಯಣ್ ರಥೋತ್ಸಕ್ಕೆ ಚಾಲನೆ ನೀಡಿದರು.
ಮೊದಲಿಗೆ ಮಹಾಗಣಪತಿ ಮತ್ತು ಚಂಡಿಕೇಶ್ವರ ರಥ, ಪಾರ್ವತಿ ಸಮೇತ ಶ್ರೀಕಂಠೇಶ್ವರ ರಥ, ಕೊನೆಯದಾಗಿ ಮನೋನ್ಮಣಿ ಅಮ್ಮನವರ ರಥೋತ್ಸಗಳನ್ನು ರಥ ಬೀದಿಯಲ್ಲಿ ಎಳೆಯಲಾಯಿತು. ಮೂರೂ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ 1.5 ಕಿಮೀ ದೂರ ರಥ ಬೀದಿಯನ್ನು ಕ್ರಮಿಸಿ 12 ಗಂಟೆಗೆ ಸ್ವಸ್ಥಾನವನ್ನು ತಲುಪಿದವು. ರಥ ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ದೇವರ ದರ್ಶನ ಪಡೆದು ಹಣ್ಣು-ಧವನ ಎಸೆದು ಹರಕೆ ತೀರಿಸಿ ಭಕ್ತಿ ಮೆರೆದರು. ನಂತರ ಹಂಸವಾಹನ ಉತ್ಸವ, ಸಂಜೆ ನಟೇಶ ಉತ್ಸವಗಳು ಜರುಗುವ ಮೂಲಕ ರಥೋತ್ಸವವು ಯಶಸ್ವಿಯಾಯಿತು. ನ.30ರ ಗುರುವಾರ ದಂದು ಕಪಿಲಾನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದ್ದು ನಂತರ ಶಯನೋತ್ಸವ ಜರುಗುವುದರೊಂದಿಗೆ ಚಿಕ್ಕಜಾತ್ರಾಮಹೋತ್ಸವಕ್ಕೆ ತೆರೆ ಬೀಳಲಿದೆ.
ಚಿಕ್ಕಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದವು. ದೇವಾಲಯದ ದಾಸೋಹ ಭವನದಲ್ಲಿ ವಿಶೇಷವಾಗಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂಧೋಬಸ್ತ್ನ್ನು ನಿಯೋಜಿಸಲಾಗಿತ್ತು.
ರಥೋತ್ಸದ ವೇಳೆ ದೇವಾಲಯದ ಇಓ ಜಗದೀಶ್, ಮಾಜಿ ಶಾಸಕ ಕಳಲೆಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಮುಖಂಡರಾದ ಶ್ರೀಧರ್, ನಾಗರಾಜಯ್ಯ, ಶಶಿರೇಖಾ, ಹುಂಡಿ ನಾಗರಾಜು, ಹಾಗೂ ದೇವಾಲಯದ ಅರ್ಚಕ ವೃಂದ, ಸಿಬ್ಬಂದಿಗಳು ಇದ್ದರು.