ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ: ಅಧಿಕಾರಿಗಳ ವಿರುದ್ಧ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ, ಬಳ್ಳಾರಿ:

ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿದ ಅಧಿಕಾರಿಗಳ ಕ್ರಮ ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಪಾಲಿಕೆ ಬಿಜೆಪಿ ಸದಸ್ಯರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.

ನಿಗದಿಯಂತೆ ಚುನಾವಣೆ ಪ್ರಕ್ರೀಯೆ ನಡೆದರೂ ಪ್ರಾದೇಶಿಕ ಆಯುಕ್ತ ಕೃಷ್ಣ ಬಜಪೆ ಅವರು ಗೈರು ಎನ್ನುವ ನೆಪವೊಡ್ಡಿ ಅಧಿಕಾರಿಗಳು ಚುನಾವಣೆಯನ್ನು ಮುಂದೂಡಿರುವ ಕ್ರಮ ಸಂವಿಧಾನ ಬಾಹಿರವಾಗಿದೆ. ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿದ್ದು, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಯಾವುದೇ ಚುನಾವಣೆ ಇರಲಿ ಒಂದು ನಿಮಿಷ ತಡವಾದರೂ ಅಧಿಕಾರಿಗಳು ಒಪ್ಪೋಲ್ಲ, ನಿಗದಿಯಂತೆ ಬೆಳಿಗ್ಗೆಯೇ ಆಗಮಿಸಿ, ಚುನಾವಣೆ ಕೊಠಡಿಯಲ್ಲಿ ಸದಸ್ಯರು ಆಸೀನರಾದರೂ, ಅಧಿಕಾರಿಗಳು ಪ್ರಾದೇಶಿಕ ಆಯುಕ್ತರು ಬಂದಿಲ್ಲ ಎಂದು ಮಹ್ಯಾಹ್ನ 1:30ರ ವರೆಗೆ ಕಾಲಹರಣ ಮಾಡಿ, ನಂತರ ಮೇಲಧಿಕಾರಿಗಳ ಆದೇಶ, ಚುನಾವಣೆ ಮುಂದೂಡಲಾಗಿದೆ ಅಂದ್ರೆ, ಸರಿಯಲ್ಲ, ನಿಗದಿಯಂತೆ ಅಧಿಕಾರಿಗಳು ಚುನಾವಣೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಮೇಯರ್ ಸ್ಥಾನ ಎಸ್ಸಿ ವರ್ಗಕ್ಕೆ ಮಿಸಲಾಗಿದ್ದು, ಬಿಜೆಪಿ ಸದಸ್ಯ ಹನುಮಂತ ಗುಡಿಗಂಟೆ ಅವರು, ನಾಮಪತ್ರ ಸಲ್ಲಿಸಿದರೂ, ಅಧಿಕಾರಿಗಳ ಮೂಲಕ ಕಾಂಗ್ರೆಸ್ ನವರು ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಿದ್ದಾರೆ‌. ಕಾಂಗ್ರೆಸ್ ನವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ, ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಪಾಲಿಕೆ ಸದಸ್ಯರಾದ ಚೇತನಾ ವೇಮಣ್ಣ, ಸುರೇಖಾ ಮಲ್ಲನಗೌಡ, ಗೋವಿಂದರಾಜಲು, ಮೋತ್ಕರ್ ಶ್ರೀನಿವಾಸ್, ಇಬ್ರಾಹಿಂ ಬಾಬು, ಹನುಮಂತ, ಗುಡಿಗಂಟೆ ಹನುಮಂತ ಸೇರಿದಂತೆ ವಿವಿಧ ಸದಸ್ಯರು ಹಾಗೂ ಮುಖಂಡರಾದ ಎಸ್.ಮಲ್ಲನಗೌಡ, ವೇಮಣ್ಣ ಇತರರಿದ್ದರು. ಸದಸ್ಯ ಗುಡಿಗಂಟೆ ಹನುಮಂತ ಅವರು ತಟ್ಟೆ, ಚಮಚ ಹಿಡಿದು ಬಾರಿಸುವ ಮೂಲಕ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!