ರಾಮಚಂದ್ರ ಬಿ. ಸುಣಗಾರ
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ಆರಂಭವಾಗುವ ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಮ್ಮ ಮನೆಗಳಲ್ಲಿಯೇ ಆದರಾತಿಥ್ಯ ನೀಡಲು ಜಿಲ್ಲೆಯ ರೈತರು ಮುಂದಾಗಿದ್ದು, ತಮ್ಮ ಮನದಾಳದ ಕೋರಿಕೆಯೊಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಸಿಬ್ಬಂದಿ ಸೇರಿ ಜನಪ್ರತಿನಿಧಿಗಳು ಬೆಳಗಾವಿಯತ್ತ ಮುಖ ಮಾಡಲಿದ್ದಾರೆ. ಹೀಗಾಗಿ ಅವರಿಗೆ ಅಲ್ಲಲ್ಲಿ ಊಟ, ವಸತಿ ಕಲ್ಪಿಸಿ ಕೋಟ್ಯಂತರ ಹಣ ವ್ಯಯಿಸುವ ಬದಲು, ಬರುವ ಗಣ್ಯರೆಲ್ಲ ನಮ್ಮ ಮನೆಗಳಲ್ಲಿ ವಾಸ್ತವ್ಯ ಮಾಡಲಿ ಎಂಬುದು ರೈತರ ಅಭಿಲಾಷೆ. ತಮ್ಮ ಮನೆಗಳಲ್ಲಿ ಆತಿಥ್ಯ ನೀಡುವ ಮೂಲಕ ಊಟ, ವಸತಿಗಾಗಿ ಖರ್ಚಾಗುವ ಕೋಟ್ಯಂತರ ಹಣವನ್ನು ರಾಜ್ಯದ ಬರ ನಿರ್ವಹಣೆಗೆ ಬಳಸಬೇಕೆಂದು ರೈತರ ಮಹದಾಸೆಯಾಗಿದೆ.
200ಕ್ಕೂ ಹೆಚ್ಚು ಮನೆ ಪಟ್ಟಿ:
ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ಪಟ್ಟಿ ಮಾಡಿರುವ ರೈತರು, ಒಂದೊಂದು ಮನೆಯಲ್ಲಿ 2-3 ಅತಿಥಿಗಳು ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಕೆಲವು ರೈತರ ಮನೆಗಳಲ್ಲಿ 5-10 ಅತಿಥಿಗಳು ಉಳಿದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಈಗಾಗಲೇ ರೈತ ಮುಖಂಡರು ಸಂಬಂಧಿಸಿದ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಜಿಲ್ಲಾಡಳಿತಕ್ಕೆ ಮನೆಗಳ ಪಟ್ಟಿ ಹಸ್ತಾಂತರಿಸಲಿದ್ದಾರೆ.
ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಿದೆ. ಮತಕ್ಷೇತ್ರಗಳಿಗೆ ಅನುದಾನವಿಲ್ಲ. ಇಂಥಃ ಸಂದಿಗ್ಧತೆಯಲ್ಲಿ ಊಟ-ವಸತಿಗೆ ಕೋಟ್ಯಂತರ ಹಣ ವ್ಯಯಿಸುವ ಬದಲು ಎಲ್ಲರೂ ನಮ್ಮ ಆತಿಥ್ಯ ಸ್ವೀಕರಿಸಲಿ , ಅದೇ ಹಣ ಬರ ನಿರ್ವಹಣೆಗೆ ವಿನಿಯೋಗಿಸಲಿ. ಅವರು ರೈತರ ಮನೆಗಳಲ್ಲಿ ಉಳಿದುಕೊಂಡರೆ, ಹೊಲ-ಮನೆ, ಗ್ರಾಮೀಣ ಪರಿಸರ, ಇಲ್ಲಿನ ಸಂಕಷ್ಟ, ತೊಳಲಾಟಗಳೆಲ್ಲ ಅರಿವಾಗುತ್ತದೆ ಎಂದು ರಾಷ್ಟ್ರೀಯ ರೈತ ಸಂಘದ ಅಧ್ಯಕ್ಷ ಪ್ರಕಾಶ ನಾಯಕ ತಿಳಿಸಿದ್ದಾರೆ.