ಕೋಟೆ ನಗರದಲ್ಲಿ ಹಂದಿಗಳೇ ಮಾಯ – ಬರೋಬ್ಬರಿ 2 ಸಾವಿರ ಹಂದಿ ಸಾವು! ಕಾರಣ ಗೊತ್ತೇ..!

ಜಗದೀಶ ಎಂ.ಗಾಣಿಗೇರ

ಬಾಗಲಕೋಟೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಂದಿಗಳಿಗೆ ಸಾಂಕ್ರಾಮಿಕ ರೋಗ ಅಂಟಿಕೊಂಡಿದ್ದು, ಪ್ರತಿದಿನ ಹಂದಿಗಳು ಮೃತಪಡುತ್ತಿವೆ. ಉಸಿರಾಟ ತೊಂದರೆಯಿಂದ ಸಾವು ಸಂಭವಿಸುತ್ತಿದೆ. ಸತ್ತ ಹಂದಿಗಳನ್ನು ಸಾಗಿಸಲು ಹಂದಿ ಸಾಕಾಣಿಕದಾರರು ಹೆಣಗಾಡುವ ಸ್ಥಿತಿ ಬಂದಿದೆ.

ನವನಗರ, ಹಳೆ ಬಾಗಲಕೋಟೆ, ವಿದ್ಯಾಗಿರಿ ಸೇರಿದಂತೆ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹಂದಿಗಳ ಸಾವಿನ ಸಂಖ್ಯೆ ಏರುತ್ತಿದೆ. ಉಸಿರಾಟದ ತೊಂದರೆಯಿಂದ ಹಂದಿಗಳು ಮೃತಪಡುತ್ತಿವೆ. ಮುಳ್ಳಿನ ಕಂಟೆ, ಮನೆಯ ಮುಂದೆ ಹಾಕಿರುವ ಕಟ್ಟಿಗೆ ಮಧ್ಯ, ಗಟಾರು, ಮನೆಗಳ ಅಕ್ಕಪ್ಪಕದಲ್ಲಿ ಹಂದಿಗಳು ಸತ್ತು ಬಿದ್ದಿರುವುದು ಎಲ್ಲೆಡೆ ಕಾಣಸಿಗುತ್ತಿವೆ.

2 ಸಾವಿರ ಹಂದಿಗಳ ಸಾವು:
ನಗರಸಭೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಒಂದೊಂದು ದಿನ 50 ಹಂದಿಗಳು ಮೃತಪಟ್ಟಿವೆ. ಕಳೆದ ಒಂದು ತಿಂಗಳಲ್ಲಿ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಸ್ಥಳಗಳಲ್ಲಿ 1800 ರಿಂದ 2000 ಹಂದಿಗಳು ಉಸಿರಾಟದ ತೊಂದರೆಯಿಂದ ಮೃತಪಟ್ಟಿವೆ. ನಗರದಲ್ಲಿ ಹಂದಿಗಳ ಸಾವು ಕೇಳಿ ಜನರೂ ಕೂಡ ಭಯಭೀತರಾಗಿದ್ದಾರೆ.

ಮಾಯವಾಗಿರುವ ಹಂದಿಗಳು:
ಬೆಳಗ್ಗೆಯಾಗುತ್ತಿದ್ದಂತೆ ನಗರದಲ್ಲಿ ಹಂದಿಗಳ ಗುಂಪು ಇರುತ್ತಿದ್ದವು. ಆದರೆ, ಈಗ ಅಪರೂಪಕ್ಕೊಂದು ಹಂದಿ ಕಾಣಸಿಗುತ್ತಿವೆ. ಅಷ್ಟೊಂದು ಹಂದಿಗಳು ಮೃತಪಟ್ಟಿವೆ. ಸದ್ಯ ಹುಡುಕಿದರೂ ನಗರದಲ್ಲಿ ಹಂದಿಗಳ ಗುಂಪು ಎಲ್ಲಿಯೂ ಕಾಣುವುದಿಲ್ಲ. ಸಾಂಕ್ರಾಮಿಕ ರೋಗ ಹಂದಿಗಳ ಸಾವಿಗೆ ಕಾರಣವಾಗಿದೆ. ಒಂದ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಹಂದಿಗಳ ಮೃತಪಟ್ಟಿದ್ದರೆ ತಕ್ಷಣವೇ ನಗರಸಭೆ ಅಧಿಕಾರಿಗಳನ್ನು ಜನರು ಸಂಪರ್ಕಿಸಬೇಕಾಗಿದೆ.

ದುರ್ವಾಸನೆ ಹೊಡೆಯುತ್ತಿದೆ:
ನಗರದ ಎಲ್ಲೆಂದರಲ್ಲಿ ಹಂದಿಗಳ ಮೃತಪಡುತ್ತಿದ್ದು, ಅವು ಸಾಗಾಟವಾಗುವವರೆಗೆ ಸುತ್ತಮುತ್ತಲಿನ ಜನ ಮೂಗು, ಬಾಯಿ ಮುಚ್ಚಿ ಸಂಚರಿಸಬೇಕಾಗಿದೆ. ನವನಗರದ ಗಟಾರುಗಳಲ್ಲಿ ಅಲ್ಲಲ್ಲಿ ಹಂದಿಗಳ ಸತ್ತು ಬಿದ್ದಿದ್ದು ಅವುಗಳಿಂದ ದುರ್ವಾಸನೆ ಹೊಡೆಯುತ್ತಿದೆ ಇದರಿಂದ ಜನ ಬೇಸತ್ತಿದ್ದಾರೆ.

ಹಂದಿಗಳಿಗೆ ಸಾಂಕ್ರಾಮಿಕ ರೋಗ ಹಬ್ಬಿದೆ. ಈ ರೋಗದಿಂದ ಜನರಿಗೆ ತೊಂದರೆಯಾಗುವುದಿಲ್ಲ. ಯಾವುದೇ ಆತಂಕ ಬೇಡ. ವೈದ್ಯರನ್ನು ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ನಗರಸಭೆ ಹಿರಿಯ ಆರೋಗ್ಯ ಅಧಿಕಾರಿ ಆರ್.ಜಿ.ಭೋವಿ ಮಾಹಿತಿ ನೀಡಿದ್ದಾರೆ.

ನಿತ್ಯ ಎಲ್ಲಾದರೂ ಒಂದು ಕಡೆ ಹಂದಿ ಸಾಯುತ್ತಿದೆ. ನಗರದಲ್ಲಿ ಎಲ್ಲಿಯೂ ಹಂದಿಗಳ ಹಿಂಡು ಸಿಗುತ್ತಿಲ್ಲ, ಹಂದಿ ಸತ್ತ ಸುದ್ದಿ ಕೇಳಿದ ತಕ್ಷಣವೇ ಅವುಗಳನ್ನು ಸಾಗಾಟ ಮಾಡುತ್ತಿದ್ದೇವೆ ಎಂದು ಹಂದಿ ಸಾಕಣೆದಾರ ಕೋನಪ್ಪ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!