ಹೊಸದಿಗಂತ ವರದಿ ಹಾವೇರಿ:
ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಯಲಾಗುತ್ತಿದ್ದ ಪಂಚ ರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್‌ಗಡ ರಾಜ್ಯಗಳಲ್ಲಿ ಕಮಲ ಬಹುಮತದೊಂದಿಗೆ ಅರಳಿದೆ.
ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆಯೇ ಜಿಲ್ಲಾ ಬಿಜೆಪಿ ಹಾಗೂ ಅದರ ಸಹವರ್ತಿ ಘಟಕಗಳ ಪದಾಧಿಕಾರಿಗಳು ಭಾನುವಾರ ಮಧ್ಯಾಹ್ನ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಕಾಂಗ್ರೆಸ್‌ನವರ ಪೊಳ್ಳು ಗ್ಯಾರಂಟಿಗಳನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿಂದ ಮತ್ತು ಕಾಂಗ್ರೆಸ್‌ನ ಪೊಳ್ಳು ಗ್ಯಾರಂಟಿಗೆ ಗೆಲುವಾಗಿದೆ. ಕರ್ನಾಟಕದ ಜನತೆ ಈಗಾಗಲೇ ರಾಜ್ಯದ ಅಭಿವೃದಿ ವಿರೋದಿ ಕೈ ಸರ್ಕಾರವ ಮೇಲೆ ವಿಶ್ವಾಸ ಕಳೆದುಕೊಂಡಿದ್ದು, ಅಲ್ಲಿಯೂ ಜನತೆ ಬೇಸರಿಸಿಕೊಳ್ಳುವ ದಿನಗಳು ದೂರವಿಲ್ಲ ಎಂದು ಹೇಳಿದರು.
ಈ ವೇಳೆ ಪಕ್ಷದ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಶಿವಯೋಗಿ ಕೊಳ್ಳಿ, ಸುರೇಶ ಹೊಸಮನಿ, ಡಾ.ಸಂತೋಷ ಆಲದಕಟ್ಟಿ, ನಿರಂಜನ ಹೇರೂರ, ಮಂಜುನಾಥ ಮಡಿವಾಳರ, ನಂಜುಂಡೇಶ ಕಳ್ಳೇರ, ಕೂಡ್ಲಪ್ಪನವರ ಮತ್ತಿತರರು ಇದ್ದರು.