ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ನೀಡಲು ಬಿಸಿಸಿಐ ಶಿಫಾರಸು ಮಾಡಿದೆ.
ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಕಡಿಮೆ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಶಮಿಗೆ ಪ್ರಶಸ್ತಿ ನೀಡಲು ಬಿಸಿಸಿಐ ವಿಶೇಷವಾಗಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಿದೆ. ನಾಮನಿರ್ದೇಶಿತರ ಪಟ್ಟಿಯಲ್ಲಿ ಶಮಿ ಹೆಸರು ಇರಲಿಲ್ಲ. ಆದರೆ, ಬಿಸಿಸಿಐನ ವಿಶೇಷ ಮನವಿಯ ಪರವಾಗಿ ನಾಮನಿರ್ದೇಶನ ಪಟ್ಟಿಯಲ್ಲಿ ಸೇರಿಸಲಾಗಿದೆ .
ವಿಶ್ವಕಪ್ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಪಡೆದ ಖ್ಯಾತಿಯನ್ನು ಶಮಿ ಹೊಂದಿದ್ದಾರೆ. ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಶಮಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆಯುವ ಮೂಲಕ ಕ್ರೀಡಾ ಜಗತ್ತಿನ ಗಮನ ಸೆಳೆದರು.
ಶಮಿ ಏಳು ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ವೇಗವಾಗಿ 50 ವಿಕೆಟ್ಗಳನ್ನು ಪೂರೈಸಿದ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋತ ನಂತರ ತೀವ್ರ ದುಃಖಕ್ಕೆ ಜಾರಿದ ಶಮಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದರು. ಈ ವಿಡಿಯೋ ಸಹ ಎಲ್ಲೆಡೆ ವೈರಲ್ ಆಗಿತ್ತು.