ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪುನಂತಹ ಮತಾಂಧರ ಹೆಸರಿಡಲು ಬಿಡುವುದಿಲ್ಲ: ರೇಣುಕಾಚಾರ್ಯ

ಹೊಸದಿಗಂತ ವರದಿ, ದಾವಣಗೆರೆ:

ಕಾಂಗ್ರೆಸ್ಸಿನ ಸಚಿವರು ತಮ್ಮ ಮನೆಗಳಿಗೆ ಟಿಪ್ಪು, ಔರಂಗಜೇಬ್ ಹೆಸರಿಟ್ಟುಕೊಳ್ಳಲಿ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಲ್ಪಸಂಖ್ಯಾತರ ಓಟ್ ಬ್ಯಾಂಕ್‌ಗಾಗಿ ಟಿಪ್ಪುನಂತಹ ಮತಾಂಧರ ಹೆಸರಿಡಲು ನಾವು ಬಿಡುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನೇಕಾರ ಸಮಾಜದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಟಿಪ್ಪು, ಬಾಬರ್, ಔರಂಗಜೇಬ, ಘಜ್ನಿ ಮಹಮ್ಮದ್ ಹೆಸರುಗಳು ಮಾತ್ರವೇ ನೆನಪಿಗೆ ಬರುತ್ತವೆ. ಹೀಗಾಗಿ ಕಾಂಗ್ರೆಸ್ಸಿನ ಸಚಿವರು ಟಿಪ್ಪು ಜಪ ಮಾಡುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್ ಆದಾಗ ಅಲ್ಪಸಂಖ್ಯಾತರು ತಮ್ಮ ಸಹೋದರರೆಂದು ಇದೇ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜ, ಸುತ್ತೂರು ಶ್ರೀಗಳಂತಹವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬರ ಪರಿಹಾರವಾಗಿ ಎಕರೆಗೆ 25 ಸಾವಿರ ರೂ. ಕೊಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಬಂದಿಲ್ಲ. ರೈತರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಲ್ಲ. ಶೀಘ್ರವೇ ಕಾಂಗ್ರೆಸ್ ಸರ್ಕಾರದ ವಿರುದ್ದ ಹೊನ್ನಾಳಿ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರಲ್ಲದೆ, ಕಾಂಗ್ರೆಸ್ಸಿಗರ ಔತಣಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಹ್ವಾನ ಮಾಡಿದ್ದಕ್ಕೆ ಕೆಲ ಬಿಜೆಪಿ ಶಾಸಕರು ಹೋಗಿದ್ದಾರೆಂದ ಮಾತ್ರಕ್ಕೆ ಪಕ್ಷವಿರೋಧಿ ಚಟುವಟಿಕೆ ಆಗುವುದಿಲ್ಲ. ಈ ಬಗ್ಗೆ ಸ್ವತಃ ಶಾಸಕರೇ ಹೇಳಿದ್ದಾರಲ್ಲವೇ? ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಅಣಜಿ ಬಸವರಾಜ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!