ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗಾಗಿ ರಣತಂತ್ರ ರೂಪಿಸಲು ಇಂಡಿ ಮೈತ್ರಿಕೂಟ ಪಕ್ಷಗಳು ಮಂಗಳವಾರ ಮಹತ್ವದ ಸಭೆ ನಡೆಸಿದೆ.
ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ ನಡುವೆ ‘ಸಮೋಸಾ’ ನೀಡಿಲ್ಲ ಎಂಬ ಮಾತು ಕೇಳಿಬಂದಿದೆ.
ಒಕ್ಕೂಟದ ಮಿತ್ರ ಪಕ್ಷ ಜೆಡಿಯು ನಾಯಕ ಸುನಿಲ್ ಕುಮಾರ್ ಪಿಂಟು ಕಾಂಗ್ರೆಸ್ ಕಾಲೆಳೆದಿದ್ದು, ಚಂದಾ ಎತ್ತುತ್ತಿರುವ ಕಾಂಗ್ರೆಸ್ ಬಳಿ ಹಣ ಇಲ್ಲ. ಹೀಗಾಗಿ ಇಂಡಿ ಒಕ್ಕೂಟ ಸಭೆಯಲ್ಲಿ ಕೇವಲ ಚಹಾ ಹಾಗೂ ಬಿಸ್ಕೆಟ್ ನೀಡಲಾಗಿದೆ. ಈ ಬಾರಿಯ ಸಭೆಯಲ್ಲಿ ಸಮೋಸಾ ನೀಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಈ ಹಿಂದಿನ ಸಭೆಯಲ್ಲಿ ಚಹಾ ಹಾಗೂ ಸಮೋಸಾ ನೀಡಲಾಗಿತ್ತು. ಆದರೆ ದುಡ್ಡಿಲ್ಲದ ಕಾಂಗ್ರೆಸ್ ಕೇವಲ ಚಹಾ ಬಿಸ್ಕೆಟ್ಗೆ ಸೀಮಿತಗೊಳಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಆರಂಭಿಸಿರುವ ದೇಣಿಗೆ ಸಂಗ್ರಹ ಕುರಿತು ಮಾತನಾಡಿದ ಸುನಿಲ್ ಕುಮಾರ್ ಪಿಂಟು, ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟಕ್ಕೆ ಇರಿಸು ಮುರಿಸು ತಂದಿದ್ದಾರೆ.ಪ್ರಮುಖವಾಗಿ ಸೀಟು ಹಂಚಿಕೆ ಚರ್ಚೆ ಫಲಪ್ರಧವಾಗಿಲ್ಲ. ಇದು ಪಿಂಟು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಪಿಂಟು, ಎಲ್ಲೀವರೆಗೆ ಸೀಟು ಹಂಚಿಕೆ ಚರ್ಚೆ ನಡೆಯುವುದಿಲ್ಲವೋ ಅಲ್ಲೀವರೆಗೆ ಇಂತಹ ಸಭೆಗಳು ಚಹಾ ಸಮೋಸಾಗೆ ಸೀಮಿತ ಎಂದು ಹೇಳಿಕೆ ನೀಡಿದ್ದರು.
ಸೀಟು ಹಂಚಿಕೆಯಾಗುವವರೆಗೆ ಇಂಡಿಯಾ ಕೂಟದ ಸಭೆಗಳು ಕೇವಲ ಚಹಾ ಮತ್ತು ಸಮೋಸಾಗಳಿಗೆ ಸೀಮಿತವಾಗಿದೆ. ನಾನು ಹೃದಯದಲ್ಲಿ ಬಿಜೆಪಿಗನಾಗಿದ್ದೇನೆ. ನಮ್ಮ ನಾಯಕ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರೆ ರಾಜೀನಾಮೆಗೆ ಸಿದ್ಧ’ ಎಂದಿದ್ದಾರೆ.
ಇದೀಗ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ ಗರಂ ಆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್ಗೆ ಈ ನಡೆ ತೀವ್ರ ಹಿನ್ನಡೆ ತರಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಇದರ ಬೆನ್ನಲ್ಲೇ ಪಿಂಟು ಹೇಳಿಕೆ ಮಹತ್ಪ ಪಡೆದಿದೆ.