ಹೊಸದಿಗಂತ ವರದಿ,ಚಿತ್ರದುರ್ಗ
ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಬೇಕೆಂದು ತೀರ್ಮಾನಿಸಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರೆಯುವ ರಾಜಕಾರಣಿ ನಾನಲ್ಲ. ಭ್ರಷ್ಟಚಾರದ ಕುರ್ಚಿಯ ಪಕ್ಕದಲ್ಲೂ ನಾನು ಕೂರುವುದಿಲ್ಲ. ಆದರೂ ಕುಳಿತಿದ್ದೇನೆ. ಯಾವುದೇ ಚುನಾವಣೆ ಪ್ರಶ್ನೆ ಇಲ್ಲ. ಭವಿಷ್ಯದ ಚುನಾವಣೆಗಳಲ್ಲೂ ಇದೇ ನನ್ನ ನಿರ್ಧಾರ ಎಂದರು.
ಮುಂದಿನ ಚುನಾವಣೆಗೆ ನೀವು ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಟಿಕೇಟ್ ಆಕಾಂಕ್ಷಿ ಅಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ನಿರ್ಧರಿಸುವುದು ನನ್ನ ಪಕ್ಷ. ನಾನು ಪಕ್ಷದ ಸೇನಾನಿ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುವವನು. ನಾನು ಯಾವುದೇ ನಿರೀಕ್ಷೆ ಹೊಂದಿದವನಲ್ಲ ಎಂದು ಹೇಳಿದರು.
ದೇಶ ಸಮೃದ್ಧವಾಗಿರಬೇಕು ಎನ್ನುವುದು ಒಂದೇ ನನ್ನ ಕನಸು. ನಾನೇ ಟಿಕೇಟ್ ತೆಗೆದುಕೊಳ್ಳಬೇಕು. ನಾನೇ ಎಂಪಿ ಆಗಬೇಕು. ನನ್ನ ಮಕ್ಕಳೇ ಆಗಬೇಕು ಎನ್ನುವ ನಾರಾಯಣಸ್ವಾಮಿ ನಾನಲ್ಲ. ಆ ಹುಚ್ಚುತನಕ್ಕೆ ಅಂಟಿಕೊಂಡಿಲ್ಲ. ಆ ಹುಚ್ಚುತನಕ್ಕೆ ಈ ಜಿಲ್ಲೆಗೆ ಬರಲಿಲ್ಲ. ನನ್ನ ಪಕ್ಷ ಇಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳಿತ್ತು ಮಾಡಿದ್ದೆ. ಇಲ್ಲಿನ ಜನ ಪ್ರೀತಿಯಿಂದ ಮತ ಕೊಟ್ಟು ಗೆಲ್ಲಿಸಿದ್ದಾರೆ. ಪಕ್ಷ ಕೂಡಾ ಅಷ್ಟೇ ಪ್ರೀತಿಯಿಂದ ಮಂತ್ರಿ ಮಾಡಿದೆ ಎಂದರು.
ಅಷ್ಟು ದೂರದಿಂದ ಬಂದು ಇಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ ಎನ್ನುವ ಕೊರಗಿದೆ. ಒಬ್ಬ ಚುನಾಯಿತ ಸದಸ್ಯ ಮತದಾರರಿಗೆ ಸಿಗಬೇಕು. ಆದರೆ, ಬೀದಿ ಬೀದಿಗೆ ಹೋಗಿ ಸುಳ್ಳು ಹೇಳಿಕೊಂಡು ಬರಲು ಆಗುವುದಿಲ್ಲ ಎಂದು ತಿಳಿಸಿದರು.
ಸ್ಥಳೀಯರಿಗೆ ಟಿಕೇಟ್ ಕೊಟ್ಟರೆ ನಾನು ಸ್ವಾಗತಿಸುತ್ತೇನೆ. ನಮ್ಮ ಪಕ್ಷ ಸರ್ವೆ ಮಾಡುತ್ತದೆ. ಆ ಸಮೀಕ್ಷೆಯಲ್ಲಿ ಸ್ಥಳೀಯರೇ ಗೆಲ್ಲುತ್ತಾರೆ ಎನ್ನುವ ವರದಿ ಬಂದರೆ ಖಂಡಿತ ಕಾರ್ಯಕರ್ತರಿಗೆ ಟಿಕೇಟ್ ಕೊಡುತ್ತದೆ. ಆಗ ನಾನು ಕೂಡಾ ಒಬ್ಬ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇದೇ ನಮ್ಮ ಪಕ್ಷದ ಸಿದ್ಧಾಂತ ಎಂದು ಹೊರಗಿನವರು-ಸ್ಥಳೀಯರು ಎನ್ನುವ ವಿಷಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಂಸದರ ಅಮಾನತು, ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಯಾ ಸದನಗಳಲ್ಲಿ ತನ್ನದೇ ಸಂಪ್ರದಾಯಗಳು ಇರುತ್ತವೆ. ಆ ಸಂಪ್ರದಾಯಗಳನ್ನು ಯಾರೂ ಮುರಿಯಬಾರದು. ಆಯಾ ಸದನಗಳಲ್ಲಿ ಸ್ಪೀಕರ್ ಪ್ರಮುಖರಾಗಿರುತ್ತಾರೆ. ಆಯಾ ಸದನಗಳಲ್ಲಿ ಪ್ರಾವಿತ್ಯ ಇರುತ್ತದೆ ಎಂದು ಸಂಸದರ ಅಮಾನುತು ವಿಷಯ ಸಮರ್ಥಿಸಿಕೊಂಡರು.
ಸಂಸತ್ತಿನಲ್ಲಿ ಪ್ರಮುಖರಾಗಿ ಸ್ಪೀಕರ್ ಇರುತ್ತಾರೆ. ಸ್ಪೀಕರ್ ವ್ಯಾಪ್ತಿಯಲ್ಲಿ ಘಟನೆಯಾದಾಗ ಅವರೇ ಉತ್ತರಿಸಬೇಕಾಗುತ್ತೆ. ಕೆಲವು ಸಂಪ್ರದಾಯಗಳಂತೆ ಕಾನೂನು ಪರಿಪಾಲನೆ ವೇಳೆ ಸ್ಪೀಕರ್ ಉತ್ತರಿಸಬೇಕಾಗುತ್ತೆ. ಸ್ಪೀಕರ್ ಗೆ ಪರಮಾಧಿಕಾರ ಇರುತ್ತದೆ.೬೦ ವರ್ಷದ ಆಳ್ವಿಕೆ ನಡೆಸಿದ ಕಾಂಗ್ರೆಸ್ ಶಿಷ್ಟಾಚಾರ ಪಾಲನೆ ಮಾಡಿದ್ದರೆ ಸಂಸದರ ಅಮಾನತು ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.