Followup | ಚಿತ್ರದುರ್ಗದ ಮನೆಯಲ್ಲಿ 5 ಅಸ್ಥಿಪಂಜರ: ಇದು ಆತ್ಮಹತ್ಯೆಯಾ? ತನಿಖೆ ಚುರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ಪಾಳುಬಿದ್ದ ಮನೆಯೊಂದರಲ್ಲಿ ಐವರ ಅಸ್ಥಿಪಂಜರಗಳು ಪತ್ತೆಯಾಗಿವೆ. ಮನೆ ಪಾಳುಬಿದ್ದು ವರ್ಷಗಳೇ ಕಳೆದಿವೆ ಎಂದು ಓಡಾಡುತ್ತಿದ್ದ ಸ್ಥಳೀಯರಿಗೆ ಅಸ್ಥಿಪಂಜರದ ಸುದ್ದಿ ಕೇಳಿ ನಿದ್ದೆ ಬಾರದಂತಾಗಿದೆ.

ಈ ಅಸ್ಥಿಪಂಜರಗಳು ಯಾರದ್ದು ಅನ್ನೋದೇನೋ ತಿಳಿದಿದೆ, ಆದರೆ ಇದು ಕೊಲೆಯಾ? ಆತ್ಮಹತ್ಯೆಯಾ? ಇನ್ನಷ್ಟು ಅನುಮಾನ, ಊಹೆ, ಭಯ, ಆತಂಕ ಇದೀಗ ಹುಟ್ಟಿಕೊಂಡಿದೆ.

ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮನುಷ್ಯರ ಹಾಗೂ ನಾಯಿಯ ಅಸ್ಥಿಪಂಜರ ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಮನೆಯಲ್ಲಿ ಶೋಧ ನಡೆಸಿದ್ದಾರೆ. ಒಂದು ಕೋಣೆಯಲ್ಲಿ ಒಂದು ಹಾಗೂ ಇನ್ನೊಂದು ಕೋಣೆಯಲ್ಲಿ ನಾಲ್ಕು ಅಸ್ಥಿಪಂಜರ ಪತ್ತೆಯಾಗಿದೆ. ಇವುಗಳನ್ನು ಜೆಎಂಐಟಿ ಶವಾಗಾರಕ್ಕೆ ಕಳುಹಿಸಲಾಗಿದೆ.

ಇದು ಆತ್ಮಹತ್ಯೆಯಾ?
ಮೇಲ್ನೋಟಕ್ಕೆ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವಂತೆ ಕಾಣಿಸುತ್ತಿದೆ. ಆದರೆ ಚಿತ್ರದುರ್ಗ ಎಸ್‌ಪಿ ಧರ್ಮೇಂಧರ್ ಕುಮಾರ್ ಈ ಬಗ್ಗೆ ಸಂಪೂರ್ಣ ತನಿಖೆ ಆದ ನಂತರವೇ ನಿಖರವಾಗಿ ಮಾಹಿತಿ ನೀಡಲು ಸಾಧ್ಯ. ಡೆತ್‌ನೋಟ್ ಸಿಕ್ಕಿದೆ. ಆದರೆ ಅದು ಕೂಡ ಅನುಮಾನಾಸ್ಪದವಾಗಿದೆ ಎಂದಿದ್ದಾರೆ.

ಅನಾಥಾಶ್ರಮದಲ್ಲಿದ್ದಾರೆ ಎಂದುಕೊಂಡಿದ್ದ ನೆಂಟರು!
ಕಳೆದ ಎಂಟು ವರ್ಷಗಳಿಂದ ನಿವೃತ್ತ ಇಂಜಿನಿಯರ್ ಜಗನ್ನಾತ್ ರೆಡ್ಡಿ ಮನೆಗೆ ನೆಂಟರು ಯಾರೂ ಬಂದಿರಲಿಲ್ಲ. ಅವರ ಸ್ನೇಹಿತರಾಗಲಿ, ಕುಟುಂಬದ ಯಾರೇ ಆಗಲಿ ಮನೆಗೂ ಬಂದಿರಲಿಲ್ಲ ಹಾಗೂ ಸಂಪರ್ಕದಲ್ಲಿಯೂ ಇರಲಿಲ್ಲ. ನೆಂಟರೆಲ್ಲರೂ ಅವರು ದೂರದ ಯಾವುದೋ ಅನಾಥಾಶ್ರಮದಲ್ಲಿ ನೆಲೆಸಿದ್ದಾರೆ ಎಂದು ತಿಳಿದುಕೊಂಡಿದ್ದರು.

ಮೂವರು ಮಕ್ಕಳಿಗೂ ಮದುವೆಯಾಗಿರಲಿಲ್ಲ!
ಜಗನ್ನಾಥ್ ರೆಡ್ಡಿ ಹಾಗೂ ಪ್ರೇಮಕ್ಕ ದಂಪತಿಗೆ ನಾಲ್ವರು ಮಕ್ಕಳಿದ್ದರು. ತ್ರಿವೇಣಿ,ನರೇಂದ್ರ, ಕೃಷ್ಣರೆಡ್ಡಿ ಹಾಗೂ ಮಂಜುನಾಥ್ ರೆಡ್ಡಿ. ಇವರಲ್ಲಿ ಮಂಜುನಾಥ್ ರೆಡ್ಡಿ ಹಿರಿಯ ಮಗ, ಇವರು ಕೇರಳದಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಇನ್ನು ನರೇಂದ್ರರೆಡ್ಡಿ ಇಂಜಿನಿಯರ್ ಆಗಿದ್ದರು. ಆದರೆ ದರೋಡೆ ಕೇಸ್‌ನಲ್ಲಿ ಜೈಲು ಶಿಕ್ಷೆ ಅನುಭವಿಸಿ ವಾಪಾಸಾಗಿದ್ದರು. ಮಗಳು ತ್ರಿವೇಣಿ ಬೋನ್ ಮ್ಯಾರೋಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಎಲ್ಲ ಕಾರಣಗಳಿಂದ ಇಡೀ ಕುಟುಂಬ ಖಿನ್ನತೆಗೊಳಗಾಗಿತ್ತು ಎನ್ನಲಾಗಿದೆ.

ಸ್ಥಳೀಯರು ಹೇಳೋದೇನು?
ಬೆಳಗಿನ ಜಾವ ಮನೆಯ ಹೊರಗೆ ಬಂದು ಕೆಲಸಗಳನ್ನು ಮುಗಿಸಿ ಸಂಪೂರ್ಣ ಬೆಳಕಾಗುವ ವೇಳೆ ಇಡೀ ಮನೆಯವರು ಬಾಗಿಲು ಹಾಕಿಕೊಂಡು ಒಳಗೇ ಇರುತ್ತಿದ್ದರು. ಅವರು ಹೊರಗೆ ಬಂದಿದ್ದು ನೋಡಿಯೇ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!