ಹೊಸದಿಗಂತ ವರದಿ ಸೋಮವಾರಪೇಟೆ:
ನೂತನವಾಗಿ ನಿರ್ಮಾಣಗೊಂಡ ಟರ್ಫ್ ಮೈದಾನದ ಉದ್ಘಾಟನೆ ಸಂದರ್ಭ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆಯಿತು.
ಹಿಂದಿನ ಬಿಜೆಪಿ ಸರಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಸೋಮವಾರಪೇಟೆಯಲ್ಲಿ ನೂತನವಾಗಿ ಟರ್ಫ್ ಮೈದಾನ ನಿರ್ಮಾಣವಾಗಿದೆ. ಆದರೆ ಬುಧವಾರ ಅದರ ಉದ್ಘಾಟನಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಅಲ್ಲದೆ ಟರ್ಫ್ ನಿರ್ಮಾಣ ಕಾಮಗಾರಿಯ ನಿರ್ವಹಣಾ ಸಮಿತಿಯನ್ನೂ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮೈದಾನ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ಕಾರನ್ನು ತಡೆಯಲು ಯತ್ನಿಸಿದರು. ಅಲ್ಲದೆ ಕ್ರೀಡಾ ಇಲಾಖೆ ಸೇರಿದಂತೆ ಅಧಿಕಾರಿಗಳ ಕಾರಿಗೂ ತಡೆ ಒಡ್ಡಿದರು.
ಈ ಸಂದರ್ಭ ಪ್ರತಿಭಟನಾಕಾರರು ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದರಾದರೂ, ಪೊಲೀಸರು ಅವರನ್ನು ತಡೆದರು.
ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್, ನಗರ ಅಧ್ಯಕ್ಷ ಸೋಮೇಶ್, ಜಿ.ಪಂ.ಮಾಜಿ ಸದಸ್ಯ ದೀಪಕ್, ತಾ.ಪಂ.ಮಾಜಿ ಸದಸ್ಯ ಅಭಿಮನ್ಯು ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.