ದಿಗಂತ ವರದಿ ವಿಜಯಪುರ:
ಹುಬ್ಬಳ್ಳಿಯ ಹಿಂದು ಕಾರ್ಯಕರ್ತನ ಬಂಧನ ಖಂಡಿಸಿ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧಿಸಿದ್ದು ಖಂಡನೀಯ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ವಿರೋಧಿ ಸರ್ಕಾರ ಎಂದು ಆರೋಪಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತ, ಮೆರವಣಿಗೆ ಹೊರಟು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕಳೆದ ಮೂವತ್ತು ವರ್ಷದ ಹಳೆಯದಾದ ಕೇಸನ್ನು ಮತ್ತೆ ಪ್ರಾರಂಭಿಸಿ, ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನನ್ನು ಬಂಧಿಸಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ತಾನು ಹಿಂದು ವಿರೋಧಿಯೆಂಬುದನ್ನು ಪದೇ ಪದೇ ಸಾಬೀತು ಪಡಿಸುತ್ತಿದೆ. ಈ ರೀತಿ ಹಿಂದು ಕಾರ್ಯಕರ್ತರನ್ನು ಬಂಧಿಸಿ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ರಾಷ್ಟ್ರಪತಿ ಆಳ್ವಿಕೆಯನ್ನು ತಂದು ದೇಶದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಬಾಬುರಾಜೇಂದ್ರ ನಾಯಕ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗೂರ ಇದ್ದರು.