ಹೊಸದಿಗಂತ ವರದಿ,ಮೈಸೂರು:
ಕುಶಾಲನಗರ: ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಇಲ್ಲಿನ ಗಣಪತಿ ದೇವಾಲಯದ ಮುಂದೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕಾಂಗ್ರೆಸ್ ಸರಕಾರ ಬಿಟ್ಟಿ ಭಾಗ್ಯಗಳೊಂದಿಗೆ ಇದೀಗ ಕೇಸು ದಾಖಲಿಸುವ ಭಾಗ್ಯ ಕೂಡಾ ಆರಂಭಿಸಿದೆ. ಹಿಂದು ವಿರೋಧಿ, ಮುಸಲ್ಮಾನರ ಪರವಾಗಿರುವ ಕಾಂಗ್ರೆಸ್ ಸರಕಾರ ಪ್ರತಿಯೊಂದು ಸನ್ನಿವೇಶಗಳಲ್ಲಿಹಿಂದೂಗಳನ್ನು ಹಣಿಯುವ ಹುನ್ನಾರ ಅನುಸರಿಸುತ್ತಿರುವುದು ಖಂಡನೀಯ. ಹಿಂದೂಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಕಾಂಗ್ರೆಸ್ ಇದೇ ಪರಿಪಾಠ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್ ಮಾತನಾಡಿ, ಮೂರು ದಶಕಗಳ ಬಳಿಕ ಕರಸೇವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸುವ ಪ್ರಯತ್ನ ನಡೆಸಿರುವ ಕಾಂಗ್ರೆಸ್ ಸರಕಾರ ಒಂದು ವರ್ಗದ ಓಲೈಕೆಗಾಗಿ ಸದಾ ಪ್ರಯತ್ನಿಸುತ್ತಿದೆ. ಹಿಂದೂ ವರ್ಗ ಬೇಡ ಎನ್ನುವ ರೀತಿಯ ವರ್ತನೆಯಲ್ಲಿ ತೊಡಗಿದೆ. ಬೆಳಗಾವಿಯಲ್ಲಿ ಬಾಲಕಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗದ ಸರಕಾರ ಇಲ್ಲಿ ದ್ವೇಷ ಸಾಧಿಸುತ್ತಿದೆ ಎಂದರು.
ಈ ಸಂದರ್ಭ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರಾದ ಕೆ.ಜಿ.ಮನು, ಜಿ.ಎಲ್.ನಾಗರಾಜ್, ಉಮಾಶಂಕರ್, ನವನೀತ್, ಎಂ.ಎಂ.ಚರಣ್, ನಾರಾಯಣ್, ದೇವರಾಜ್, ರೂಪಾ ಉಮಾಶಂಕರ್, ನವನೀತ್, ಮಧುಸೂದನ್, ಮಂಜುನಾಥ್, ರಾಜೀವ, ಚಂದ್ರಶೇಖರ್ ಹೆರೂರು, ಚಂದ್ರು, ಗಣಪತಿ, ಚಂದ್ರಶೇಖರ್, ಗೀತಾ, ಸೋಮಶೇಖರ್ ಮತ್ತಿತರರು ಇದ್ದರು.