ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೊ ನೆಟ್‌ವರ್ಕ್ ವಿಸ್ತರಣೆ ಹಾಗೂ ಪೂರ್ಣಾವಧಿ ಎಂಡಿ ನೇಮಕ ಮಾಡುವಲ್ಲಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರ ವಿಫಲವಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋಗೆ ಪೂರ್ಣವಾಧಿ ಎಂಡಿ ನೇಮಕ ಮಾಡದ ಹಿನ್ನೆಲೆ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿದೆ ಎಂದರು.
ಸಂಚಾರ ದಟ್ಟನೆ ತಡೆಗಟ್ಟಲು ಮೆಟ್ರೋ ನೆಟವರ್ಕ್ ಹೆಚ್ಚಿಸಬೇಕೆಂಬುದು ಚಿಂತನೆ ಆಗಿತ್ತು. ಆದರೆ ಮೆಟ್ರೋ ನೆಟ್‌ವರ್ಕ್ ವಿಸ್ತರಿಸುವಲ್ಲಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರ ವಿಫಲವಾಗಿದೆ. ಸರ್ಕಾರ ಬಂದು 7 ತಿಂಗಳು ಆಗಿದೆ. ಇಲ್ಲಿವರೆಗೂ ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಕವಾಗಿಲ್ಲ. ಹೀಗಾಗಿ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್, ಜನರ ಹಣ ಪೋಲು ಆಗುತ್ತಿದೆ ಎಂದರು.
ಮೆಟ್ರೋ ಯೋಜನೆ ಯಾವತ್ತು ಅವರು ನೀಡಿರುವ ಡೆಡ್‌ಲೈನ್‌ಗೆ ಮುಗಿದಿಲ್ಲ. ಪ್ರತಿ ಪ್ರಾಜೆಕ್ಟ್ ಮೇಲೆ 2-3 ವರ್ಷ ವಿಳಂಬ ಆಗುತ್ತಿದೆ. ಇದಕ್ಕೆ ಕಾರಣ BMRCLಗೆ ಬೇಕಾದ ಒಬ್ಬ ವ್ಯಕ್ತಿನ (ಎಂಡಿ) ನೇಮಿಸಿಲ್ಲ. ಈ ವಿಚಾರವಾಗಿ ನಾನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದರು.
ಬೆಂಗಳೂರು ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಿಸಿ, ಕೇಂದ್ರದಿಂದ ಒಪ್ಪಿಗೆ ನೀಡುವ ಜವಾಬ್ದಾರಿ ನನ್ನದು
ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಆಗಿವೆ. ಆದರೆ ಇಲ್ಲಿಯವರೆಗೂ ಸಿಎಂ ಸಿದ್ದರಾಮಯ್ಯ ಆಗಲಿ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಆಗಲಿ ಒಂದೇ ಒಂದು ಬಾರಿಯು ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಆದಷ್ಟು ಬೇಗ ಮೆಟ್ರೋಗೆ ಒಬ್ಬ ಎಂಡಿನ ನೇಮಕ ಮಾಡಿದರೆ ಅದನ್ನ ಕೇಂದ್ರದಲ್ಲಿ ಒಪ್ಪಿಗೆ ನೀಡುವ ಜವಾಬ್ದಾರಿ ನನ್ನದು ಎಂದರು.
ದೇವಸ್ಥಾನದ ಒಳಗೆ ಬರದವರಿಂದ ಇಫ್ತಿಯಾರ್ ಕೂಟ ಆಯೋಜನೆ
ದೇವಸ್ಥಾನದ ಗರ್ಭಗುಡಿಯೊಳಗೆ ಸಿದ್ದರಾಮಯ್ಯ ಪ್ರವೇಶ ನಿರಾಕರಣೆ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಾರ್ಟಿಯವರಿಗೆ ಹಿಂದೂಗಳ ನಂಬಿಕೆಗಳನ್ನು ಅಪಮಾನ ಮಾಡುವುದು ರಕ್ತಗತವಾಗಿದೆ. ದೇವಸ್ಥಾನದ ಒಳಗೆ ಕರೆದರೂ ಬರದವರು ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದನ್ನು ನೋಡಿದ್ದೇವೆ ಎಂದರು.
ಗೋದ್ರಾ ಹತ್ಯಾಕಾಂಡ ಕರ್ನಾಟಕದಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ಬಿ.ಕೆ ಹರಿಪ್ರಸಾದ್ ಈ ರೀತಿ ಬೇಜವ್ದಾರಿ ಹೇಳಿಕೆ ಕೊಡುವುದರಲ್ಲಿ ನಿಸ್ಸೀಮರು. ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ಇದೇ ಮೊದಲೇನಲ್ಲ ಎಂದರು.
ನಮಗೆ ಗೊತ್ತಿಲ್ಲದ ಯಾವುದೋ ವಿಷಯ ಅವರಿಗೆ ಗೊತ್ತಿರಬಹುದು. ಯಾವುದೋ ಮಾಹಿತಿ ಅವರಿಗೆ ತಿಳಿದಿರಬಹುದು. ಪಿಎಫ್ಐ ನಂತಹ ಸಂಘಟನೆಗಳೊಂದಿಗೆ ಸಂಪರ್ಕವೊಂದಿರುವ ಬಿಕೆ ಹರಿಪ್ರಸಾದ್ ಈ ರೀತಿಯ ಮಾಹಿತಿ ಇರಬಹುದು. ಇದು ತುಂಬಾ ಗಂಭೀರ ವಿಚಾರ. ಬಿ.ಕೆ ಹರಿಪ್ರಸಾದ್ ಅವರನ್ನು ತನಿಖೆ ಮಾಡುವಂತೆ ಎನ್ಐಎ ಬಳಿ ನಾನು ಮನವಿ ಮಾಡುತ್ತೇನೆ ಎಂದರು.