ಹೊಸದಿಗಂತ ವರದಿ ಶಿವಮೊಗ್ಗ:
ಸಹ್ಯಾದ್ರಿ ವಿಜ್ನಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರೋರ್ವರು ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಿಎಸ್ಸಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಭೌತಶಾಸ್ತ್ರ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ 45 ವರ್ಷದ ವ್ಯಕ್ತಿ ವಿರುದ್ಧ ವಿದ್ಯಾರ್ಥಿನಿಯರು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆದರೂ ಪ್ರಾಂಶುಪಾಲರು ಯಾವುದೇ ಕ್ರಮ ಜರುಗಿಸಿಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಅತಿಥಿ ಉಪನ್ಯಾಸಕ ಹಿಂದಿನಿಂದಲೂ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವಾಗಿ ನಡೆದುಕೊಳ್ಳುತ್ತಿದ್ದಾರೆ. ತರಗತಿಯಲ್ಲಿ ಪಾಠ ಮಾಡುವಾಗ ಅಸಹ್ಯ ಸಂಭಾಷಣೆ ಹೇಳುತ್ತಾರೆ. ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳನ್ನು ಬೇಗನೇ ಕಳಿಸಿ ವಿದ್ಯಾರ್ಥಿನಿಯರನ್ನು ಮಾತ್ರ ಇರಿಸಿಕೊಳ್ಳುತ್ತಾರೆ. ಪ್ರಯೋಗಾಲಯದಲ್ಲಿ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಾರೆ. ಕೆಲವರಿಗೆ ರಾತ್ರಿ ವೇಳೆ ಮೊಬೈಲ್ ಸಂದೇಶ ಕೂಡ ರವಾನಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಉಪನ್ಯಾಸಕ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಮಾಡುತ್ತಿರುವ ಕುರಿತು ಒಂದು ವರ್ಷದ ಹಿಂದೆಯೇ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಅಥಿತಿ ಉಪನ್ಯಾಸಕನನ್ನ ಕೆಲಸದಿಂದ ತೆಗೆಯದಿದ್ದರೆ ಹಾಗೂ ಎಫ್ಐಆರ್ ದಾಖಲಿಸದಿದ್ದರೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.