ಹೊಸದಿಗಂತ ವರದಿ,ಕಾರವಾರ:
ತಳಭಾಗದಲ್ಲಿ ಬಿರುಕು ಬಿಟ್ಟು ನೀರು ಒಳನುಗ್ಗಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮೀನುಗಾರಿಕೆ ಬೋಟನ್ನು ಇತರ ಮೀನುಗಾರರ ಸಹಾಯದಿಂದ ಗೋವಾ ಕೋಸ್ಟ್ ಗಾರ್ಡ್ ಮತ್ತು ಕಾರವಾರದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ರಕ್ಷಿಸಿ ಕಾರವಾರ ಮೀನುಗಾರಿಕೆ ಬಂದರಿಗೆ ಎಳೆದು ತಂದಿದ್ದಾರೆ.
ಕಾರವಾರದಿಂದ ಸುಮಾರು 40 ನಾಟಿಕಲ್ ಮೈಲಿ ದೂರದ ಗೋವಾ ರಾಜ್ಯ ವ್ಯಾಪ್ತಿಯ ಬೇಥುಲ್ ಬಳಿ ಅರಬ್ಬೀ ಸಮುದ್ರದಲ್ಲಿ ಮಂಗಳೂರಿನ ರಾಯಲ್ ಬ್ಲೂ ಹೆಸರಿನ ಪರ್ಸಿನ್ ಮೀನುಗಾರಿಕೆ ಬೋಟಿನ ತಳದಿಂದ ಬೋಟಿನೊಳಗೆ ನೀರು ಬರುತ್ತಿದ್ದರಿಂದ ಬೋಟಿನಲ್ಲಿದ್ದ ಏಳು ಜನ ಕಾರ್ಮಿಕರು ಆತಂಕಗೊಂಡು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು.
ಗೋವಾ ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನಿಸಿ ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲು ಪಡೆ ಇತರ ಆರು ಮೀನುಗಾರಿಕೆ ಬೋಟುಗಳ ಸಹಾಯದಿಂದ ಅಪಾಯಕ್ಕೆ ಸಿಲುಕಿದ್ದ ಬೋಟನ್ನು ಸುರಕ್ಷಿತವಾಗಿ ಕಾರವಾರ ಮೀನುಗಾರಿಕೆ ಬಂದರಿಗೆ ಎಳೆದು ತಂದಿದ್ದು ಬೋಟಿನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.