Wednesday, February 21, 2024

ಮಾರುತಿ ಓಮ್ನಿ- ಬೊಲೆರೋ ಡಿಕ್ಕಿ: ತಂದೆ -ಮಗಳು ಸಾವು

ಹೊಸದಿಗಂತ ವರದಿ,ಕುಶಾಲನಗರ:

ಮಾರುತಿ ಓಮ್ನಿ‌ ಮತ್ತು ಬೊಲೆರೋ‌ ಜೀಪು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿ ಚಾಲಕ ಹಾಗೂ ಅವರ ಪುತ್ರಿ ಮೃತಪಟ್ಟ ಘಟನೆ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ಬುಧವಾರ ಅಪರಾಹ್ನ ನಡೆದಿದೆ.

ಬಸವನಹಳ್ಳಿ ನಿವಾಸಿ ರಾಜೇಶ್ ದೇವಯ್ಯ (38) ಹಾಗೂ ಅವರ ಪುತ್ರಿ ಮೂರು ವರ್ಷದ ನ್ಯಾನ್ಸಿ ಬೊಳ್ಳಮ್ಮ ಮೃತ ದುರ್ದೈವಿಗಳು.
ರಾಜೇಶ್ ದೇವಯ್ಯ ಮೂಲತಃ ಕಾಲೂರು ಗ್ರಾಮದವರಾಗಿದ್ದು, ಪ್ರಸಕ್ತ ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ನೆಲೆಸಿದ್ದರು. ದೇವಯ್ಯ ಹಾಗೂ ಪುತ್ರಿ ನ್ಯಾನ್ಸಿ ಬೊಳ್ಳಮ್ಮ ಮಡಿಕೇರಿಯಲ್ಲಿ ತಮ್ಮ ನಾದಿನಿಯ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಓಮ್ನಿಯಲ್ಲಿ ಬಸವನಹಳ್ಳಿಗೆ ಮರಳುತ್ತಿದ್ದರೆ, ದೇವಯ್ಯ ಅವರ ಪತ್ನಿ ಸ್ಮಿತಾ ಅವರು ಸ್ಕೂಟರ್’ನಲ್ಲಿ ಇವರನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.

ಆನೆಕಾಡು ಬಳಿ ಬೋಯಿಕೇರಿಗೆ ತೋಟದ ಕೆಲಸಕ್ಕೆ‌ ಕಾರ್ಮಿಕ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಬೊಲೆರೋ ಜೀಪು ಇವರ ಕಾರಿಗೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ರಾಜೇಶ್ ದೇವಯ್ಯ ಸ್ಥಳದಲ್ಲೇ ಮೃತಪಟ್ಟರೆ, ಮಡಿಕೇರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ‌ ಮಗಳು‌ ನ್ಯಾನ್ಸಿ ಮೃತಪಟ್ಟಿದ್ದಾಳೆ.

ರಾಜೇಶ್ ದೇವಯ್ಯ ಅವರ ಪತ್ನಿ ಸ್ಮಿತಾ ಅವರು ಸ್ಕೂಟಿಯಲ್ಲಿ ಬರುತ್ತಿದ್ದುದರಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಬೊಲೆರೋ ಚಾಲಕ ಅರುಣ್, ಕಾರ್ಮಿಕ ಮಹಿಳೆಯರಾದ ಜಯಲಕ್ಷ್ಮಿ, ನೀಲಮ್ಮ ಅವರುಗಳಿಗೂ ಗಂಭೀರ ಗಾಯಗಳಾಗಿವೆ.
ಮೃತ ರಾಜೇಶ್ ದೇವಯ್ಯ ನಿವೃತ್ತ ಸೇನಾ ಉದ್ಯೋಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!