ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ಬಿಎಂಟಿಸಿ ಬಸ್, ಮೆಟ್ರೋ, ಶಾಪಿಂಗ್ ಮಾಲ್ ಗಳಲ್ಲಿ ಪುಂಡರ ಅಟ್ಟಹಾಸ ತಡೆಯುವವರೇ ಇಲ್ಲದಂತಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ವಿಜಯನಗರದಲ್ಲಿ ನಡೆದಿದ್ದು, ಪುಂಡ ಕಾಮುಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಡುಗಿಯರನ್ನ ಮುಟ್ಟಿ ವಿಕೃತ ಆನಂದ ಪಡೆಯುವ ಕೃತ್ಯ ವಿಜಯನಗರದ ಹೋಟೆಲ್ ನಮ್ಮೂಟ ಬಳಿ ಬೆಳಕಿಗೆ ಬಂದಿದೆ. ಘಟನೆ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂವರು ಹುಡುಗರು ಹೋಟೆಲ್ ಗೆ ಬಂದ ಯುವತಿಯರನ್ನು ಟಾರ್ಗೆಟ್ ಮಾಡಿ ತನಗೆ ಬೇಕಾದಂತೆ ಮುಟ್ಟಿ ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ವಿಕೃತಕಾಮಿ, ಯುವತಿಯೊಬ್ಬಳನ್ನು ಸ್ಪರ್ಶಿಸಿರುವುದು ವಿಡಿಯೋ ಕಣ್ಗಾವಲಿನಲ್ಲಿ ದಾಖಲಾಗಿದೆ. ಹುಡುಗಿಯನ್ನು ಮುಟ್ಟುವ ಮೊದಲು, ಮೂವರು ಹುಡುಗರು ಪ್ಲಾನ್ ಮಾಡುತ್ತಾರೆ, ಮತ್ತು ಅವರಲ್ಲಿ ಒಬ್ಬರು ಹುಡುಗಿಯನ್ನು ಮುಟ್ಟಲು ಉದ್ದೇಶಿಸಿದಾಗ, ಉಳಿದ ಇಬ್ಬರು ನೋಡುತ್ತಾರೆ. ನಂತರ ಗಲಾಟೆ ನಡೆದರೆ ಎಲ್ಲವೂ ಸರಿಯಿದೆ ಎಂಬಂತೆ ಓಡಿ ಹೋಗುತ್ತಾರೆ.
ಅದೇ ರೀತಿ ವಿಜಯನಗರದ ನಮ್ಮೂಟ ಹೋಟೆಲ್ ಹೊರಗೆ ಯುವತಿಯೊಬ್ಬಳನ್ನು ಲೈಂಗಿಕವಾಗಿ ಸ್ಪರ್ಶಿಸಿ ಅಟ್ಟಹಾಸ ಮೆರೆದಿದ್ದಾನೆ. ಈ ವೇಳೆ ಇಡೀ ದೃಶ್ಯ ಸಿಸಿಟಿವಿಯಲ್ಲಿ ಚಿತ್ರೀಕರಿಸಲಾಗಿದೆ.
ಘಟನೆ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.