ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಧಟತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ಪ್ರತಿಯೊಂದಕ್ಕೂ ಕೇಂದ್ರವ ಮತ್ತು ಪ್ರಧಾನಮಂತ್ರಿಗಳನ್ನು ದೂರುವ ಪರಿಪಾಠ ಬೆಳೆಸಿಕೊಂಡಿದೆ. ಇದು ಸರಿಯಲ್ಲ. ಕಾಂಗ್ರೆಸ್ ಸರಕಾರವು ತನ್ನ ಆಡಳಿತ ವೈಫಲ್ಯ, ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಸಂಕಷ್ಟದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಉದ್ದೇಶದಿಂದ ನಿರಂತರವಾಗಿ ಮೋದಿ ಅವರ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರದ ಈ ನಡವಳಿಕೆಯ ಬಗ್ಗೆ ಕನ್ನಡಿಗರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು. ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರಕಾರವೇ ಆಲೋಚನೆ ಮಾಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಕೇಂದ್ರದ ಮೇಲೆ ಗೂಬೆ ಕುರಿಸುವುದು ಸರಿ ಅಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು.
ಲೋಪ ಆಗಿರುವ ಕಡೆ ಗಮನ ಹರಿಸಿ ಸರಿ ಮಾಡಿಕೊಳ್ಳಬೇಕು. ದೆಹಲಿಗೆ ಹೋಗಿ ಚರ್ಚೆ ಮಾಡಬೇಕು. ಆದರೆ, ಮುಖ್ಯಮಂತ್ರಿಯೊಬ್ಬರು ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆಯುವುದು ಉದ್ಧಟತನದ ಪರಮಾವಧಿ. ಇದು ಸರಿಯಾದ ನಡವಳಿಕೆ ಅಲ್ಲ. ಪ್ರಧಾನಿಗಳನ್ನು ಚರ್ಚೆಗೆ ಕರೆಯುವ ಮುನ್ನ ತಮ್ಮಿಂದ ಆಗಿರುವ ಲೋಪಗಳನ್ನು ಸರಿ ಪಡಿಸಿಕೊಳ್ಳಬೇಕಿದೆ. ಆ ಸೌಜನ್ಯವನ್ನು ಮುಖ್ಯಮಂತ್ರಿಗಳು ತೋರಿಸಬೇಕಿದೆ. ನಲವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ರಾಜ್ಯದ ನೀರಾವರಿಗೆ ಏನಾದರೂ ಕೊಡುಗೆ ನೀಡಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆಯೇ ಟಾಂಗ್ ನೀಡಿದರು ಮಾಜಿ ಮುಖ್ಯಮಂತ್ರಿಗಳು.