ಹೊಸದಿಗಂತ ವರದಿ, ಶಿವಮೊಗ್ಗ:
ನಗರದ ಸಹ್ಯಾದ್ರಿ ಕಾಲೇಜು ಮುಂಭಾಗ ಇರುವ “ದೂರದರ್ಶನ ಕೇಂದ್ರದ ಹೆಚ್ ಪಿ ಟಿ ಟವರ್” ನಲ್ಲಿ ನೂತನ “10 ಕಿಲೋ ವ್ಯಾಟ್ ಸಾಮರ್ಥ್ಯ” ದ ಟ್ರಾನ್ಸ್ ಮೀಟರ್ ಅಳವಡಿಕೆಯ ಶಂಕು ಸ್ಥಾಪನೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ ನಿಂದ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು.
ಪ್ರಸ್ತುತ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯಲ್ಲಿ ಆಕಾಶವಾಣಿ ಮತ್ತು ಎಫ್.ಎಂ ರೇಡಿಯೋ ಸುಮಾರು 1 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಉನ್ನತಿಕರಣದ ನಂತರ ಇದರ ವ್ಯಾಪ್ತಿ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ರಾಘವೇಂದ್ರ ತಿಳಿಸಿದರು.
ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತ್ಯಧಿಕ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಕೆ ಕಾರ್ಯ ನಮ್ಮ ಶಿವಮೊಗ್ಗದಲ್ಲಿ ಆಗುತ್ತಿರುವುದು ನಮಗೆಲ್ಲ ಹೆಮ್ಮೆ ಹಾಗೂ ಸಂತೋಷ ತರುವ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ರುದ್ರೇಗೌಡರು, ಅವರು ಡಿ.ಎಸ್. ಅರುಣ್ , ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.