ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯಾ ಶ್ರೀರಾಮ ಮಂದಿರದ (Ayodhya Ram Mandir) ಪ್ರತಿಷ್ಠೆಗೆ ತಗಾದೆ ಎತ್ತಿ ಟೀಕಿಸುತ್ತಿರುವ ರಾಜಕಾರಣಿಗಳಿಗೆ ಉಡುಪಿ ಕಾಣಿಯೂರು ಮಠಾಧೀಶ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು ಮಾತಿನ ಚಾಟಿ ಬೀಸಿದ್ದಾರೆ.
ಮೂರ್ತಿ ರಾಮನಂತಿಲ್ಲ ದಿಗ್ವಿಜಯ ಸಿಂಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ದಿಗ್ವಿಜಯ ಸಿಂಗ್ ರಾಮನನ್ನು ನೋಡಿದ್ದಾರಾ? ನೋಡಿದ್ದರೆ ಹೇಳಲಿ ರಾಮ ಹೇಗಿದ್ದ ಎಂದು ಎಂದು ಹೇಳಲಿ, ಬೇಕಾದರೆ ಅದೇ ತರ ಮಾಡೋಣ. ಹಿಂದುಗಳು ಒಗ್ಗಟ್ಟಾಗುತ್ತಿದ್ದಾರೆ, ಅದನ್ನು ಸಹಿಸಲು ಆಗುತ್ತಿಲ್ಲ, ಹಿಂದು ವೋಟು ಬ್ಯಾಂಕ್ ಬಗ್ಗೆ ಆತಂಕವಾಗಿದೆ.ರಾಮನ ಬೊಂಬೆ ಇಟ್ಟರು ಎಂದು ಯಾರೋ ಹೇಳಿಕೆ ನೀಡಿದ್ದಾರೆ ಇವೆಲ್ಲ ನಿರಾಶೆಯ ಪ್ರತೀಕಗಳು ಅಷ್ಟೇ. ಎಲ್ಲರಿಗೂ ಒಳಗಿನಿಂದ ರಾಮನ ಬಗ್ಗೆ ಭಕ್ತಿ ಇರುತ್ತದೆ. ಆದರೆ ಬೇರೊಂದು ಪಕ್ಷದ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ನಿರಾಸೆ ಇರಬಹುದು. ಇದಕ್ಕೆಲ್ಲ ತಲೆ ಕೆಡಿಸಬೇಕಾಗಿಲ್ಲ ಎಂದರು.
ಶನಿವಾರ ಉಡುಪಿಯಲ್ಲಿ ಮಾತನಾಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥರು, ಅಯೋಧ್ಯೆಯಲ್ಲಿನ ಪ್ರಾಣ ಪ್ರತಿಷ್ಠೆಗೆ ಆಹ್ವಾನ ಬಂದಿರುವುದು ಖುಷಿ ತಂದಿದೆ. ನಾನು ಈಗಲೇ ಅಯೋಧ್ಯೆಗೆ ಹೊರಟಿದ್ದೇನೆ. ಆಹ್ವಾನದ ಬಗ್ಗೆ ಮೊದಲು ಗೊಂದಲ ಇತ್ತು. ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ, ಆದರೆ ಟ್ರಸ್ಟ್ ನಿಂದ ಆಹ್ವಾನ ಬಂದ ಬಳಿಕ ಖಚಿತಗೊಂಡಿತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕು ಎಂಬ ಬಯಕೆ ಇತ್ತು ಎಂದರು.
ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದ್ದು, ಟೆಂಟ್ ನ ಒಳಗೆ ರಾಮನ ವಿಗ್ರಹ ಪ್ರತಿಷ್ಠೆ ಮಾಡಿದವರೇ ಪೇಜಾವರ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥರು. ಅನೇಕರ ಪ್ರಯತ್ನದಿಂದ ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದರು.
ರಾಮನ ಪ್ರತಿಮೆ ಮುಖ ಬಹಳ ಸುಂದರವಾಗಿದ್ದು, ಮಂದಸ್ಮಿತ ದೇಹ ಲಕ್ಷಣಗಳು ಆಕರ್ಷಕವಾಗಿದೆ. ರಾಮ ದೇವರನ್ನೇ ಕಣ್ಣಾರೆ ನೋಡಿದಂತಾಗುತ್ತಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮನ ಪ್ರತಿಮೆ ಕರ್ನಾಟಕದಲ್ಲಿ ಆಗಿದ್ದು ಅನ್ನೋದು ಸಂತೋಷದ ವಿಚಾರವಾಗಿದೆ. ಇನ್ನು ಮುಂದೆ ಅಲ್ಲಿ ಶಾಶ್ವತವಾಗಿ ಆ ಪ್ರತಿಮೆ ಇರಲಿದೆ. ನಮ್ಮ ರಾಜ್ಯದ ಶಿಲ್ಪಿ ಕೆತ್ತಿರುವ ಪ್ರತಿಮೆ ಸುಂದರವಾಗಿ ಮೂಡಿಬಂದಿದ್ದು, ಅಯೋಧ್ಯೆಗೆ ಹೋದಾಗಲೆಲ್ಲ ಇದನ್ನು ನಾವು ನೆನಪು ಮಾಡಿಕೊಳ್ಳಬಹುದು ಎಂದರು.
ಆಹ್ವಾನ ಇದ್ದು ಹೋಗದವರ ಬಗ್ಗೆ ನೋ ಕಮೆಂಟ್ಸ್. ಅವರಿಗೆ ದೇವರೇ ಬುದ್ದಿ ಕೊಡಬೇಕು, ದೇವರೇ ಅವರನ್ನು ಕರೆಸಿಕೊಳ್ಳುತ್ತಾರೆ ಅಷ್ಟೇ ಹೇಳಬಹುದು. ರಾಮದೇವರು ಯಾರಿಗೂ ಕನಸಲ್ಲಿ ಬಂದು ಬರಬೇಡ ಎಂದು ಹೇಳಿರುವುದಿಲ್ಲ, ಅದೆಲ್ಲ ಕೇವಲ ಅವರವರ ಕಲ್ಪನೆಯಾಗಿದೆ ಎಂದರು.