ಹಾನಗಲ್ ಘಟನೆ ಖಂಡಿಸಿ ಬೊಮ್ಮಾಯಿ ಸಹಿತ ಬಿಜೆಪಿ ನಾಯಕರಿಂದ ಎಸ್ಪಿ ಕಚೇರಿಗೆ ಮುತ್ತಿಗೆ

ಹೊಸದಿಗಂತ ವರದಿ, ಹಾವೇರಿ :

ಹಾನಗಲ್ ಗ್ಯಾಂಗ್ ರೇಪ್ ಘಟನೆ ನಿರ್ವಹಣೆ ಮಾಡುವಲ್ಲಿ ಪೊಲೀಸರ ವೈಫಲ್ಯ ಹಾಗೂ ರಾಜ್ಯ ಸರ್ಕಾರ ಅದರ ಸಂತ್ರಸ್ಥೆಗೆ ಅಗತ್ಯ ಸಾಂತ್ವನ ಅಥವಾ ಧೈರ್ಯ ನೀಡುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಘಟಕ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ನಗರ ಪೊಲೀಸ್ ಠಾಣೆಯವರೆಗೆ ಕರೆದೊಯ್ದು ಅಲ್ಲಿಂದ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ರಾಜ್ಯ ಮಹಿಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ ನೇತೃತ್ವದಲ್ಲಿ ಜೆ.ಪಿ.ರಸ್ತೆ, ಜಯಪ್ರಕಾಶ ನಾರಾಯಣ ವೃತ್ತದ ಮೂಲಕ ಸಾಗಿ ಎಸ್ಪಿ ಕಚೇರಿ ಬಳಿ ಸಮಾವೇಶಗೊಂಡು ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲಾ ಸರಿ ಇದ್ದರೆ ನಾವು ಪ್ರತಿಭಟನೆ ಮಾಡುವ ಅಗತ್ಯವೇ ಇರಲಿಲ್ಲ. ಸಂತ್ರಸ್ಥೆಗೆ ಚಿಕಿತ್ಸೆ ಕೊಡದೇ ಸರ್ಕಾರದ ಮರ್ಯಾದೆ ಕಾಯಲು ಅವಳನ್ನು ಶಿಪ್ಟ್ ಮಾಡಿದ್ದೀರಿ. ಇನ್ನು ಸಿಎಂ ಹೇಳಿಕೆ ನೋಡಿ ನನಗೆ ಆಶ್ವರ್ಯ ಆಗಿದೆ. ನಮ್ಮ ಶಾಸಕರು ನೋಡಿಕೊಳ್ಳುತ್ತಾರೆ ಎಂದರೆ ಹೇಗೆ? ಶಾಸಕರು ಚಿಕಿತ್ಸೆ ಕೊಡುತ್ತಾರಾ? ಕುರಿ ಕಾಯೋಕೆ ತೋಳವನ್ನೇ ನಿಲ್ಲಿಸಿದ ಹಾಗಿದೆ ಈ ಸರ್ಕಾರದ ನಡೆ. ಇನ್ನು ಘಟನೆಯ ನೇರ ಹೊಣೆಗಾರಿಕೆ ಇರುವ ಪಿಎಸ್‌ಐ ಬಿಟ್ಟು ಸಿಪಿಐ ವಜಾ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ದೂರು ಕೊಡದಿರಲು ರೂ.೫೦ಲಕ್ಷದ ಆಮಿಷದ ಬಗ್ಗೆ ಯಾರು ತನಿಖೆ ಮಾಡಿದ್ದಾರೆ. ಪ್ರಕರಣದಲ್ಲಿ ಇಲ್ಲದ ಕೆಲ ಅಮಾಯಕರನ್ನು ಬಂಧನ ಮಾಡಿದ್ದಾರೆ ಎಂದು ಸಂತ್ರಸ್ತೆ ಸ್ವತಃ ಹೇಳಿದ್ದಾಳೆ. ನಿಜವಾದ ಆರೋಪಿಗಳು ಸಮಾಜದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ.

ಇನ್ನು ಘಟನೆ ಕುರಿತು ಪೊಲೀಸರು ಪ್ರಕರಣವನ್ನೇ ಮುಚ್ಚಿ ಹಾಕುವ ಯತ್ನಕ್ಕೆ ಮುಂದಾಗಿದ್ದರು. ಮಹಿಳೆಗೆ ಮನೆಗೆ ಹೋಗಿ ರೇಪ್ ಆಗಿದೆ ಅನ್ನೋ ವಿಡಿಯೋ ಹಾಕಿದ್ದಾರೆ. ಅಲ್ಲದೆ ನ್ಯಾಯಾಧೀಶರ ಮುಂದೆ ೧೬೪ ಹೇಳಿಕೆ ನೀಡಿದ ಮೇಲೆ ಕೇವಲ ಹಲ್ಲೆ ಕೇಸ್ ಎಂದಿದ್ದನ್ನು ಅಪಹರಣ ಮತ್ತು ರೇಪ್ ಪ್ರಕರಣ ದಾಖಲು ಮಾಡಿದ್ದಾರೆ.
ಆ ಮಹಿಳೆ ಮತ್ತು ಅವರ ಗಂಡನ ಧೈರ್ಯವನ್ನು ಮೆಚ್ಚಲೇಬೇಕು ಎಂದು ಶ್ಲಾಘಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾತನಾಡಿ ಪೊಲೀಸ್ ಸ್ಟೇಷನ್‌ಗಳು ಸೆಟಲ್‌ಮೆಂಟ್ ಕೇಂದ್ರಗಳಾಗುತ್ತಿವೆ. ಹಾನಗಲ್ ಗ್ಯಾಂಗ್ ರೇಪ್ ಘಟನೆಯಲ್ಲಿ ಆರೋಪಿತರ ನೆಟ್‌ವರ್ಕ ಚೆನ್ನಾಗಿ ಕೆಲಸ ಮಾಡಿದ್ದು, ಪೊಲೀಸರೂ ಅಷ್ಟು ಚೆನ್ನಾಗಿ ನೆಟ್‌ವರ್ಕ ಹೊಂದಿಲ್ಲ ಎಂಬುದನ್ನು ತೋರಿಸಿದೆ. ಸಮೀಪದಕಾಡಿನಲ್ಲಿ ಮಹಿಳೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಿದ್ದರಾಮಯ್ಯನವರೇ ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂದಿರಲ್ಲ, ನಿಮ್ ಗೊರಕೆ ಸದ್ದು ವಿದೇಶಕ್ಕೆ ಸಹ ಕೇಳಿಸುತ್ತಿದೆ. ಮೊದಲು ನಿದ್ದೆಯಿಂದ ಎದ್ದು, ರಾಜ್ಯದಲ್ಲಿನ ಸ್ಥಿತಿಯನ್ನು ತಿಳಿದುಕೊಳ್ಳಿ ಎಂದು ಚಾಟಿ ಬೀಸಿದರು.

ಇನ್ನು ಕರಸೇವಕರನ್ನು ಅದೂ ಯಾವುದೇ ಪ್ರಕರಣ ಇಲ್ಲದೇ ಇರುವ, ಅವನ ಎರಡು ಕೈ ಆಪರೇಷನ್ ಆಗಿ, ನಡೆದಾಡಲೂ ಕಷ್ಟಪಡುವವನನ್ನು ಬಂಧಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ.

ಮೊನ್ನೆ ಬೆಳಗಾವಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಈಗ ಹಾವೇರಿಯಲ್ಲಿ ಅಲ್ಪಸಂಖ್ಯಾತ ಹೆಣ್ಣುಮಗಳ ಮೇಲೆ ಕ್ರೂರವಾದ ದೌರ್ಜನ್ಯ ಜರುಗಿದೆ. ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿದೆ. ಪ್ರಕರಣ ನಡೆದ ಮೂರು ದಿನಕ್ಕೆ ಬೆಳಕಿಗೆ ಬಂದಿದೆ. ಮೊದಲು ನೈತಿಕ ಪೊಲೀಸಗಿರಿ ಅಂತಾ ಬಂತು. ನಂತರ ಇದು ೭ಜನರಿಂದ ಗ್ಯಾಂಗರೇಪ್ ಅಂತಾಯ್ತು. ಅರೇಸ್ಟ್ ಆದವರಲ್ಲಿ ಕೆಲವು ಪ್ರಭಾವಿಗಳು ಇದ್ದಾರೆ. ಅದಕ್ಕೆ ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಇದರಲ್ಲಿ ಭಯೋತ್ಪಾದಕ ಸಂಘಟನೆಯ ಕೈವಾಡ ಇದೆ ಎಂಬ ಅನುಮಾನವಿದೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು, ಈ ಸರ್ಕಾರಕ್ಕೆ ಪೂರಕವಾಗಿ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಪ್ರಕರಣದ ವಿಚಾರಣೆ ಕುರಿತು ಸಿಎಂ ಶಾಸಕರು ಇದ್ದಾರೆ ಎನ್ನುವುದಾದರೆ, ಪೊಲೀಸ್ ಠಾಣೆ ಮುಚ್ಚಿ ಬಿಡಿ, ಪೊಲೀಸ್ ಠಾಣೆಯಲ್ಲಿ ಕರೆದು ಅವರಿಗೆ ಅಧಿಕಾರ ಕೊಟ್ಟುಬಿಡಿ. ರಾಜ್ಯದಲ್ಲಿ ಪ್ರತಿ ಹುದ್ದೆಗೆ ರೆಟ್ ಫಿಕ್ಸ್ ಆಗಿದೆ, ಒಳ್ಳೆಯ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ಅಯೋಧ್ಯೆದಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ರಾವಣರಿಗೆ ಶಿಕ್ಷೆಯಾಗಬೇಕು. ಅವರಿಗೆ ಬಿರಿಯಾನಿ ಕೊಟ್ಟು ಸುಮ್ಮನೆ ಆಗಿದ್ದಿರಿ. ಈ ಪ್ರಕರಣವನ್ನ ಎಸ್‌ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!