ಹೊಸದಿಗಂತ ವರದಿ, ಕುಶಾಲನಗರ:
ಇಲ್ಲಿನ ಶ್ರೀ ರಾಮ ಸೇವಾ ಸಮಿತಿ ಮತ್ತು ಕುಶಾಲನಗರ ಸಮಸ್ತ ದೇವಾಲಯಗಳ ಒಕ್ಕೂಟ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯದಿಂದ ಲಾಡು ವಿತರಣೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ನಿಮಿತ್ತ ಲಾಡು ಪ್ರಸಾದವನ್ನು ತಯಾರಿಸಿ ಪೊಟ್ಟಣಕ್ಕೆ ತುಂಬಿಸುವ ಕಾರ್ಯವನ್ನು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಅಂದಾಜು 300ಕ್ಕೂ ಅಧಿಕ ಮಂದಿ ಸ್ವಯಂಸೇವಕರು ಪಾಲ್ಗೊಂಡು 35 ರಿಂದ 40 ಸಾವಿರ ಲಾಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಲಾಡು ತಯಾರಿ ಕಾರ್ಯ ಭರದಿಂದ ಸಾಗಿದೆ.
ಸೋಮವಾರ ಕುಶಾಲನಗರ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳುವ ಬಗ್ಗೆ ದೇವಾಲಯಗಳ ಒಕ್ಕೂಟ ತೀರ್ಮಾನಿಸಿದ್ದು, ಅಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಲಾಡು ವಿತರಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ಹಿಂದೂ ಕೂಡಾ ಕನಿಷ್ಟ ಐದು ದೀಪಗಳನ್ನು ಹಚ್ಚಿ ಧನ್ಯರಾಗಬೇಕಿದೆ. ತಾಲೂಕಿನಾದ್ಯಂತ ಇರುವ ಕರಸೇವಕರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಗುವುದು ಎಂದು ದೇವಾಲಯ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.
ಹಿಂದೂಪರ ಸಂಘಟನೆ ಪ್ರಮುಖ ಬಿ.ಅಮೃತ್ ರಾಜ್ ಮಾತನಾಡಿ, ರಾಮಮಂದಿರ ಉದ್ಘಾಟನೆ ಮೂಲಕ
ರಾಮ ಯುಗದ ಆರಂಭವಾಗುತ್ತಿದೆ. ಕುಶಾಲನಗರದಲ್ಲಿ ಇದನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದು, 25 ಮಂದಿ ಬಾಣಸಿಗರು ಒಳಗೊಂಡಂತೆ ಭಜನಾ ಮಂಡಳಿ, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು, ಸ್ವಯಂ ಸೇವಕರು ಲಾಡು ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಲಾಡು ವಿತರಣೆಗೆ ಗುರುತಿಸಿರುವ ಸ್ಥಳಗಳಲ್ಲಿ ವಾಸವಿ ಯುವಜನ ಸಂಘ ಹಾಗೂ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಮೂಲಕ ಪ್ರಸಾದ ವಿತರಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ನಾರಾಯಣ್, ವೈಶಾಖ್, ಭರತ್ ಮಾಚಯ್ಯ, ಪ್ರಶಾಂತ್ ಮತ್ತಿತರರು ಇದ್ದರು.